ಕೆಎಸ್ಆರ್ ಟಿಸಿ ಸಿಬಂದಿಗಳಿಗೆ 1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆಜಾರಿ

ಬೆಂಗಳೂರು,ನ.14- ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( ಕೆಎಸ್ಆರ್ ಟಿಸಿ) ಸಿಬಂದಿಗಳಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಲಾಗಿದೆ.
ಈಗಾಗಲೇ ರೂ 50 ಲಕ್ಷ ವಿಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಹಾಗೂ ಇಂದು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ಮಾಡಿಕೊಂಡ ಒಡಂಬಡಿಕೆಯ ರೂ.50 ಲಕ್ಷ ಸೇರಿ, ಒಟ್ಟು ರೂ.1 ಕೋಟಿ ಅಪಘಾತ ವಿಮೆಯನ್ನು ಸಂಸ್ಥೆಯ ಸಿಬ್ಬಂದಿಗಳಿಗೆ ಜಾರಿ ಮಾಡಲಾಗಿದ್ದು ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಇದು ಪ್ರಪ್ರಥಮವಾಗಿದೆ.
ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಅಧ್ಯಕ್ಷರಾದ ಎಂ. ಚಂದ್ರಪ್ಪರವರ ಸಮ್ಮುಖದಲ್ಲಿ ವಿ.ಅನ್ಬುಕುಮಾರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ಹಾಗೂ ಅಂಗ್ರೂಪ್ ಸೋನಂ, ಪ್ರಧಾನ ವ್ಯವಸ್ಥಾಪಕರು, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ರವರು ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಯ ಒಡಂಬಡಿಕೆಗೆ ಸಹಿ ಹಾಕಿದರು.
ನಿಗಮದ ಸಿಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಎಸ್ ಬಿಐ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತರಲಾಗಿದೆ.
ಇದರ ಮುಂದುವರಿದ ಭಾಗವಾಗಿ, ಇಂದು ನಿಗಮವು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ರವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು , ಅದರಂತೆ ಸಿಬಂದಿಗಳಿಗೆ ರೂ.50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿರುತ್ತದೆ.
ಈ ವಿಮಾ ಯೋಜನೆಗೆ ಸಿಬಂದಿಗಳು ಮಾಹೆಯಾನ ರೂ.62.50 + ಜಿ.ಎಸ್.ಟಿ ಸೇರಿದಂತೆ (ವಾರ್ಷಿಕ ರೂ.885/- ಪ್ರೀಮಿಯಂ) ಪಾವತಿಸಬೇಕಾಗುತ್ತದೆ.
ಈ ಸಂದರ್ಭದಲ್ಲಿ, ಮಾತನಾಡಿದ ನಿಗಮದ ಮಾನ್ಯ ಅಧ್ಯಕ್ಷರಾದ ಶ್ರೀ ಎಂ. ಚಂದ್ರಪ್ಪ ನವರು ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದ್ದು, ಅಪಘಾತ (On duty ಮತ್ತು Off duty ಒಳಗೊಂಡಂತೆ ನೀಡಲಾಗುವ) ವಿಮಾ ಯೋಜನೆಯಾಗಿರುವುದು ಸಿಬಂದಿಗಳಿಗೆ ಮತ್ತಷ್ಟು ಅನುಕೂಲವಾಗಲಿದೆಯೆಂದು ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷರು ಈ ಯೋಜನೆಗೆ ತುಂಬು ಹೃದಯದ ಸಹಕಾರ ನೀಡಿದ ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡರಾದ ಅನಂತ ಸುಬ್ಬರಾವ್ ಮತ್ತು ಇತರೆ ಕಾರ್ಮಿಕ ಮುಖಂಡರುಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ರವರ ಸಹಯೋಗವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ. ನವೀನ್ ಭಟ್ ವೈ, ಭಾಆಸೇ, ನಿರ್ದೇಶಕರು (ಸಿಬಂದಿ ಮತ್ತು ಜಾಗೃತ) ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡರುಗಳಾದ ಅನಂತ ಸುಬ್ಬರಾವ್ ಮತ್ತು ಇತರೆ ಕಾರ್ಮಿಕ ಸಂಘಗಳ ಮುಖಂಡರುಗಳು , ಉಷಾ ಚಂದ್ರಮೌಳಿ, ಪ್ರಾದೇಶಿಕ ವ್ಯವಸ್ಥಾಪಕರು, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ಬೆಂಗಳೂರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಬಂದಿಗಳು ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಇಂದು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ರವರೊಂದಿಗೆ ಮಾಡಿಕೊಂಡಿರುವುದು ಹಾಗೂ ಕೆಲ ದಿನಗಳಷ್ಟು ಹಿಂದೆಯಷ್ಟೇ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾರವರೊಡನೆ ಸಹಿ ಹಾಕಿರುವ ಒಡಂಬಂಡಿಕೆಯು ಕಾರ್ಮಿಕರ ಹಿತ ಕಾಪಾಡುವಲ್ಲಿ ಚರಿತಾರ್ಹವಾದ ಕ್ಷಣಕ್ಕೆ ಸಾಕ್ಷಿಯಾಗಿದೆ.