ರವಿಚಂದ್ರನ್ ಪುತ್ರನ 'ಮುಗಿಲ್‌ಪೇಟೆ' 19ಕ್ಕೆ ತೆರೆಗೆ

ಶಿವಮೊಗ್ಗ: ನಟ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಚಿತ್ರ 'ಮುಗಿಲ್ ಪೇಟೆ' ನ.19ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
'ಈ ಚಿತ್ರ ನನ್ನ ಪಾಲಿಗೆ ಬಹುನಿರೀಕ್ಷೆಯ ಚಿತ್ರ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
'ಭರತ್ ಎಸ್. ನಾವುಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಡೀ ಚಿತ್ರತಂಡದ ಶ್ರಮವಿದೆ. 90 ದಿನಗಳು ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮೊದಲಾದ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ' ಎಂದು ವಿವರ ನೀಡಿದರು.
ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬ. ಈ ಎರಡು ಕುಟುಂಬದ ಎರಡು ಜೀವಗಳ ಮಧ್ಯೆ ಪ್ರೀತಿ ಹುಟ್ಟಿದಾಗ ಏನಾಗುತ್ತದೆ ಎಂಬುದೆ 'ಮುಗಿಲ್ ಪೇಟೆ'ಯ ಕಥಾವಸ್ತು. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ಚಿತ್ರದಲ್ಲಿದೆ ಎಂದರು.
'ಮೊದಲ ಬಾರಿಗೆ ನಟ ಸಾಧುಕೋಕಿಲ 17 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ತಾರಾ, ಅವಿನಾಶ್ ಅವರಂತಹ ಉತ್ತಮ ಕಲಾವಿದರೊಡನೆ ಅಭಿನಯಿಸಿದ್ದ ಅನುಭವ ಅವಿಸ್ಮರಣೀಯ. ನಾಯಕಿ ಕಯಾದು ಲೋಹರ್ ಅವರ ಅಭಿನಯ ಸೊಗಸಾಗಿದೆ. ಚಿತ್ರದ ತುಣುಕು, ಹಾಡುಗಳನ್ನು ಅಪ್ಪ ಮೆಚ್ಚಿದ್ದಾರೆ' ಎಂದು ಸಂತಸ ಹಂಚಿಕೊಂಡರು.