ವ್ಯಂಗ್ಯ ಚಿತ್ರಕಾರ ಗಂಗಾಧರ್ ಅಡ್ಡೇರಿ ಕೋವಿಡ್‌ನಿಂದ ನಿಧನ

ಶಿವಮೊಗ್ಗ: ವ್ಯಂಗ್ಯ ಚಿತ್ರಕಾರ, ಶಿಕ್ಷಕ ಗಂಗಾಧರ್ ಅಡ್ಡೇರಿ (43) ಸೋಮವಾರ ನಿಧನರಾದರು. ವಾರದ ಹಿಂದೆ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ರಾತ್ರಿ ಆಮ್ಲಜನಕದಮಟ್ಟ ಕಡಿಮೆಯಾಗಿತ್ತು. ಆಸ್ಪತ್ರೆ ಸಿಬ್ಬಂದಿ ವೆಂಟಿಲೇಟರ್ ವ್ಯವಸ್ಥೆ ಮಾಡುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪದ ಅಡ್ಡೇರಿಯ ಗಂಗಾಧರ್ ಬೆಂಗಳೂರು ಹೊಸಕೋಟೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಲಾಕ್‌ಡೌನ್‌ ಘೋಷಣೆ ಸಮಯದಲ್ಲಿ ಊರಿಗೆ ಬಂದಿದ್ದರು. ಬಂದ ಕೆಲವು ದಿನಗಳಲ್ಲೇ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ರಾಜ್ಯಮಟ್ಟದ ಹಲವು ಪತ್ರಿಕೆಗಳಲ್ಲಿ ಅವರ ವ್ಯಂಗ್ಯ ಚಿತ್ರಗಳು ಪ್ರಕಟವಾಗಿವೆ. ಹಲವು ಪ್ರಶಸ್ತಿಗಳಿಗೂ ಪುರಸ್ಕೃತರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ನಾಲ್ಕು ದಿನಗಳ ಮೊದಲು ಅಪ್ಪ ಸಾವು: ಅರಣ್ಯ ಇಲಾಖೆ ನಿವೃತ್ತ ನೌಕರರಾಗಿದ್ದ ಅವರ ತಂದೆ ಈಶ್ವರಪ್ಪ ಮೇ14ರಂದು ಕೋವಿಡ್‌ನಿಂದ ಮೆಗ್ಗಾನ್‌ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಅವರ ಸಾವಿನ ಸುದ್ದಿ ತಿಳಿಸುವ ಮೊದಲೇ ಪುತ್ರನೂ ಇಹಲೋಕ ತ್ಯಜಿಸಿದ್ದಾರೆ.

ವ್ಯಂಗ್ಯ ಚಿತ್ರಕಾರ ಗಂಗಾಧರ್ ಅಡ್ಡೇರಿ ಕೋವಿಡ್‌ನಿಂದ ನಿಧನ