ಕೋನರಡ್ಡಿ ಕಾಂಗ್ರೆಸ್ ಸೇರಿದ್ದಕ್ಕೆ ವಿರೋಧ. ಗಂಭೀರ ಆರೋಪ ಮಾಡಿದ ಜೆಡಿಎಸ್
ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ಧಾರವಾಡದ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಕೋನರಡ್ಡಿ ಅವರ ಭಾವಚಿತ್ರ ದಹನ ಮಾಡಿ ಪ್ರತಿಭಟನೆ ನಡೆಸಿದರು. ನವಲಗುಂದ ಕ್ಷೇತ್ರದ ಮಾಜಿ ಶಾಸಕ ಕೋನರಡ್ಡಿ ಮೊದಲು ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಹೊರಟ್ಟಿ ಅವರು ಮಂತ್ರಿಯಾದ ಮೇಲೆ ಕೋನರಡ್ಡಿ ಧಾರವಾಡದಲ್ಲಿ ಮನೆ, ಜಾಗ ಕೊಂಡುಕೊಂಡಿದ್ದಾರೆ. ಅವರಿಗೆ ದುಡ್ಡು ಎಲ್ಲಿಂದ ಬಂತು? ಸಾಕಷ್ಟು ಲ್ಯಾಂಡ್ಗಳನ್ನು ಮಾಡಿಕೊಂಡಿದ್ದಾರೆ. ಇವರ ಮೇಲೆ ಏಕೆ ಐಟಿ ದಾಳಿಯಾಗುವುದಿಲ್ಲ? ಕುಮಾರಸ್ವಾಮಿ ಅವರು ಕೋನರಡ್ಡಿ ಅವರಿಗೆ ಕಾಂಗ್ರೆಸ್ ಸೇರು ಎಂದು ಹೇಳೇ ಇಲ್ಲ. ಕೋನರಡ್ಡಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಎಲ್ಲರೂ ಜೈಲಿಗೆ ಹೋಗಿ ಬಂದವರೇ ಇದ್ದಾರೆ. ಕೋನರಡ್ಡಿ ಸಹ ಜೈಲಿಗೆ ಹೋಗಲಿದ್ದಾರೆ ಎಂದು ಜೆಡಿಎಸ್ ಮುಖಂಡ ಸುರೇಶ ಹಿರೇಮಠ ಗಂಭೀರ ಆರೋಪ ಮಾಡಿದರು.ಅಲ್ಲದೇ ಮಾಜಿ ಶಾಸಕ ಮೇಲೆ ಕಾಣದಂತೆ ಮಾಯವಾದನು ಕೋನರಡ್ಡಿ ಕೋನದಂತೆ ಓಡಿ ಹೋದನು. ಎಂಬ ಅಣಕುಬರಿತ ಹಾಡುಗಳನ್ನು ಹಾಡಿದ ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ನಲ್ಲಿ ಅವರನ್ನು ಇಟ್ಟುಕೊಳ್ಳಬಾರದು. ಜೆಡಿಎಸ್ಗೆ ಮೋಸ ಮಾಡಿ ಕೋನರಡ್ಡಿ ಹೋಗಿದ್ದಾರೆ. ಕೋನರಡ್ಡಿ ಧಾರವಾಡಕ್ಕೆ ಬಂದರೆ ಅವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ಕಾರ್ಯಕರ್ತರು ಹೇಳಿದರು....