ಕೈವ್‌ನಲ್ಲಿ ಹೆಲಿಕಾಪ್ಟರ್ ಪತನ, ಉಕ್ರೇನ್‌ನ ಆಂತರಿಕ ಸಚಿವ ಸೇರಿ 16 ಮಂದಿ ಸಾವು

ಕೈವ್‌ನಲ್ಲಿ ಹೆಲಿಕಾಪ್ಟರ್ ಪತನ, ಉಕ್ರೇನ್‌ನ ಆಂತರಿಕ ಸಚಿವ ಸೇರಿ 16 ಮಂದಿ ಸಾವು

ಕೈವ್‌: ಉಕ್ರೇನ್‌ನ ರಾಜಧಾನಿ ಕೈವ್‌ ಹೊರಗಿನ ಶಿಶುವಿಹಾರದ ಬಳಿ ಇಂದು ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಗವರ್ನರ್ ತಿಳಿಸಿದ್ದಾರೆ.

ಸತ್ತವರಲ್ಲಿ ಉಕ್ರೇನ್‌ನ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಇತರ ಅಧಿಕಾರಿಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಹಲವರು ರೋಧಿಸುತ್ತಿರುವುದು ಕೇಳಿ ಬರುತ್ತಿದೆ.

ಬ್ರೋವರಿ ನಗರದಲ್ಲಿ, ಶಿಶುವಿಹಾರ ಮತ್ತು ವಸತಿ ಕಟ್ಟಡದ ಬಳಿ ಹೆಲಿಕಾಪ್ಟರ್ ಬಿದ್ದಿದೆ ಎಂದು ಕೈವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಒಲೆಕ್ಸಿ ಕುಲೆಬಾ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ದುರಂತದ ಸಮಯದಲ್ಲಿ, ಮಕ್ಕಳು ಮತ್ತು ಉದ್ಯೋಗಿಗಳು ಶಿಶುವಿಹಾರದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.