ಪಿಡಬ್ಲ್ಯೂಡಿ ಕಾಮಗಾರಿಗಳ ಬಗ್ಗೆ ಮೊಲಕಾಲ್ಮೂರು ಜನರ ತೀವ್ರ ಆಕ್ರೋಶ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆಯುತ್ತಿರುವ ಪಿಡಬ್ಲ್ಯೂಡಿ ಇಲಾಖೆಯ ಕಾಮಗಾರಿಗಳ ಬಗ್ಗೆ ಮೊಲಕಾಲ್ಮೂರು ಜನರಿಂದ ತೀವ್ರ ವ್ಯಕ್ತವಾಗುತ್ತಿದೆ. ಹೌದು. ಪರಿಶಿಷ್ಟರೇ ಹೆಚ್ಚಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯುದಯಕ್ಕಾಗಿ ಪರಿಶಿಷ್ಟರು ವಾಸಿಸುವ ಕಾಲೋನಿಗಳಲ್ಲಿ ರಸ್ತೆಗಳು, ಭವನಗಳು ಸೇರಿದಂತೆ ಹಲವು ಪ್ರಗತಿದಾಯಕ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರದಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳ ಉಡಾಫೆ, ಬೇಜವಾಬ್ದಾರಿತನ ಮತ್ತು ಗುತ್ತಿಗೆದಾರರ ಲಾಭಕೋರತನದಿಂದಾಗಿ ಸರ್ಕಾರಿ ಯೋಜನೆಗಳು ಹಿಡಿಯುತ್ತಿವೆ. ಈ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿದ್ದು ರಸ್ತೆ ನಿರ್ಮಾಣ ಮಾಡುತ್ತಿರುವಾಗಲೇ ರಸ್ತೆಗಳು ಸಣ್ಣ ಮಳೆಗೆ ಕೊಚ್ಚಿ ಹೋಗುತ್ತಿವೆ... ಸಿ.ಸಿ. ರಸ್ತೆಗಳು ನಿರ್ಮಾಣ ಮಾಡುವಾಗ ಕನಿಷ್ಠ ಮಾನದಂಡಗಳನ್ನು ಗಾಳಿಗೆ ತೂರಿ ಕೆಲವು ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡುತ್ತಿದ್ದಾರೆ ಎನ್ನುವ ಆರೋಪ ತಾಲೂಕಿನಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಮುತ್ತಿಗಾರಹಳ್ಳಿ ಗ್ರಾಮದಲ್ಲಿ ಕಳೆದ ಎಂಟು ಹತ್ತು ದಿನಗಳ ಹಿಂದೆ st ಕಾಲೋನಿಯಲ್ಲಿ ನಿರ್ಮಾಣಗೊಂಡಿರುವ ರಸ್ತೆಯು ಕಳಪೆ ಗುಣಮಟ್ಟದ್ದಾಗಿದ್ದು, ರಸ್ತೆಯ ಜಲ್ಲಿಕಲ್ಲು, ಸಿಮೆಂಟ್ ಕಾಂಕ್ರೀಟ್ ಕಿತ್ತು ಹಾಳಾಗಿ ಹೋಗಿವೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಜೆ.ಬಿ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಇದೇ ರೀತಿಯಾಗಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮದ ವ್ಯಕ್ತಿಯೋರ್ವ ಗುತ್ತಿಗೆದಾರನ ವಿರುದ್ಧ ಮಾಡಿರುವ ಆರೋಪದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತಾಲೂಕಿನ ಜನರಿಂದ ವ್ಯಾಪಕವಾಗಿ ಪ್ರತಿರೋಧ ವ್ಯಕ್ತವಾಗುತ್ತಿದೆ. ತಾಲೂಕಿನಲ್ಲಿ ಇವರೆಗೂ ನಡೆದ ಪಿಡಬ್ಲ್ಯೂಡಿ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಗುತ್ತಿಗೆದಾರರ ಜೊತೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವುದರಿಂದ ಇಂತಹ ಕಳಪೆ ಕಾಮಗಾರಿಗಳು ಆಗುತ್ತಿವೆ ಈ ಬಗ್ಗೆ ಕೂಡಲೇ ತನಿಖೆಯಾಗಬೇಕು.ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ಹಣ ದುರುಪಯೋಗವಾಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಾಲೂಕಿನ ಜನರ ಆಗ್ರಹಿಸಿದ್ದಾರೆ.