ಓಟಿಟಿಗೆ ಬಂದ ಮೇಲೂ ಚಿತ್ರಮಂದಿರಗಳಲ್ಲಿ ಮುಂದುವರಿದ ಕ್ರಾಂತಿ ಪ್ರದರ್ಶನ; ಯಾವ ಊರುಗಳಲ್ಲಿ ಎಷ್ಟು ಶೋ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಕಳೆದ ಜನವರಿ 26ರಂದು ಗಣ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡಿತ್ತು. ಸುಮಾರು 22 ತಿಂಗಳುಗಳ ಬಳಿಕ ಬಂದ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ಮೊದಲ ದಿನವೇ 12 ಕೋಟಿ ಗಳಿಸುವುದರ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿತು
ದರ್ಶನ್ ಅಭಿಮಾನಿಗಳು ಚಿತ್ರ ಸೂಪರ್, ನೆಕ್ಸ್ಟ್ ಲೆವೆಲ್ ಎಂದು ಮೆಚ್ಚಿಕೊಂಡರೆ ಸಾಮಾನ್ಯ ಸಿನಿ ರಸಿಕರಿಗೆ ಸಿನಿಮಾ ಹೆಚ್ಚೇನೂ ಹಿಡಿಸಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಈ ಹಿಂದೆ ದರ್ಶನ್ ನಟನೆಯ ಚಿತ್ರಗಳಾದ ಯಜಮಾನ ಹಾಗೂ ರಾಬರ್ಟ್ ಮಾಡಿದ್ದಂತಹ ಮೋಡಿಯನ್ನು ಕ್ರಾಂತಿ ಮಾಡುವಲ್ಲಿ ಯಶಸ್ವಿಯಾಗಲಿಲ್ಲ.
ಮೊದಲ ದಿನ ಅಬ್ಬರದ ಆರಂಭ ಪಡೆದುಕೊಂಡಿದ್ದ ಕ್ರಾಂತಿ ಚಿತ್ರ ನಂತರದ ದಿನಗಳಲ್ಲಿ ಇಳಿಕೆಯನ್ನು ಕಂಡಿತು. ಬುಕಿಂಗ್ ನಿಧಾನಗತಿಯಲ್ಲಿತ್ತು ಹಾಗೂ ದಿನದಿಂದ ದಿನಕ್ಕೆ ಪ್ರದರ್ಶನಗಳ ಸಂಖ್ಯೆಯೂ ಕಡಿಮೆಯಾದವು. ಹೀಗಾಗಿ 42 ದಿನಗಳ ಬಳಿಕಿ ಚಿತ್ರಮಂದಿರದಿಂದ ಓಟಿಟಿಗೆ ಬರಬೇಕಿದ್ದ ಕ್ರಾಂತಿ ಚಿತ್ರ 28 ದಿನಗಳು ಕಳೆಯುತ್ತಿದ್ದಂತೆಯೇ ಬಂದುಬಿಟ್ಟಿದೆ. ಇನ್ನು ಇಷ್ಟು ಬೇಗ ಚಿತ್ರ ಓಟಿಟಿಗೆ ಬಂದದ್ದು ದರ್ಶನ್ ಅಭಿಮಾನಿಗಳಲ್ಲಿ ಬೇಸರವನ್ನು ತಂದಿದೆ.
ಮಧ್ಯರಾತ್ರಿಯಿಂದ ಕ್ರಾಂತಿ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗುತ್ತಿದ್ದು, ಚಿತ್ರ ಓಟಿಟಿಗೆ ಬಂದಿರುವುದರಿಂದ ಚಿತ್ರಮಂದಿರಗಳಿಂದ ಕ್ರಾಂತಿ ಇನ್ನೊಂದೆರಡು ದಿನಗಳಲ್ಲಿ ಹೊರ ಹೋಗುವುದಂತೂ ಖಚಿತ. ಇನ್ನು ಇಂದು ( ಫೆಬ್ರವರಿ 23 ) ಕ್ರಾಂತಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು ಈ ದಿನವೂ ಸಹ ಕ್ರಾಂತಿ ರಾಜ್ಯದ ಹಲವೆಡೆ ಪ್ರದರ್ಶನವನ್ನು ಕಾಣುತ್ತಿದೆ. ಯಾವ ಊರುಗಳಲ್ಲಿ ಇಂದು ಕ್ರಾಂತಿ ಚಿತ್ರ ಎಷ್ಟು ಪ್ರದರ್ಶನವನ್ನು ಕಾಣುತ್ತಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಇಂದು ( ಫೆಬ್ರವರಿ 23 ) ಬೆಂಗಳೂರಿನಲ್ಲಿ 48 ಪ್ರದರ್ಶನಗಳನ್ನು ಕಾಣುತ್ತಿದ್ದು, ಮೈಸೂರಿನಲ್ಲಿ 9 ಪ್ರದರ್ಶನಗಳು, ಶಿವಮೊಗ್ಗದಲ್ಲಿ ಒಟ್ಟು 7 ಪ್ರದರ್ಶನಗಳು, ದಾವಣಗೆರೆಯಲ್ಲಿ 4 ಪ್ರದರ್ಶನಗಳು, ಹುಬ್ಬಳ್ಳಿಯಲ್ಲಿ 2 ಪ್ರದರ್ಶನಗಳು, ಬಳ್ಳಾರಿಯಲ್ಲಿ 4 ಪ್ರದರ್ಶನಗಳು, ಧಾರವಾಡ, ಮಂಡ್ಯ, ಚಾಮರಾಜನಗರ ಹಾಗೂ ಬೆಳಗಾವಿಯಲ್ಲಿ ತಲಾ 4 ಪ್ರದರ್ಶನಗಳು ಮತ್ತು ಮಂಗಳೂರಿನಲ್ಲಿ ಒಂದು ಪ್ರದರ್ಶನವನ್ನು ಕ್ರಾಂತಿ ಚಿತ್ರ ಕಾಣುತ್ತಿದೆ.
ಸದ್ಯ ಇಂದು ಗುರುವಾರವಾಗಿದ್ದು, ನಾಳೆ ಶುಕ್ರವಾರ ಹಲವಾರು ಹೊಸ ಚಿತ್ರಗಳು ಬಿಡುಗಡೆಯಾಗುವ ಕಾರಣ ಕ್ರಾಂತಿ ಇಂದೇ ರಾಜ್ಯದ ಹಲವೆಡೆ ತನ್ನ ಕೊನೆಯ ಪ್ರದರ್ಶನವನ್ನು ಕಾಣಲಿದೆ. ನಾಳೆ ಸಮಯಕ್ಕೆ ಬಹುತೇಕ ಎಲ್ಲೆಡೆ ತನ್ನ ಓಟವನ್ನು ಕೊನೆಗೊಳಿಸಲಿದೆ ಎನ್ನಬಹುದು.
ಇನ್ನು ಕ್ರಾಂತಿ ಚಿತ್ರತಂಡ ಚಿತ್ರ ನಾಲ್ಕು ದಿನಗಳಲ್ಲಿಯೇ ನೂರು ಕೋಟಿ ಕ್ಲಬ್ ಸೇರಿದೆ ಎಂಬ ಸೆಲೆಬ್ರೇಷನ್ ಅನ್ನೂ ಸಹ ಮಾಡಿತು. 109 ಕೋಟಿ ಗಳಿಸಿದೆ ಎಂಬ ಕೇಕ್ ಅನ್ನು ಕತ್ತರಿಸಿದ್ದ ಚಿತ್ರತಂಡ ಸಕ್ಸಸ್ ಆಚರಿಸಿತ್ತು. ಇನ್ನು ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಚಿತ್ರದ ನಿರ್ಮಾಪಕರು ಮಾತ್ರ ಚಿತ್ರ ಎಷ್ಟು ಗಳಿಸಿದೆ ಎಂಬ ಮಾಹಿತಿಯ ಬಗ್ಗೆ ಬಾಯಿ ಬಿಡಲಿಲ್ಲ. ಈ ಹಿಂದೆಯೇ ಇದೇ ನಿರ್ಮಾಪಕರು ತಾವು ಯಾವ ಚಿತ್ರಕ್ಕೂ ಸಹ ಇಷ್ಟು ಕಲೆಕ್ಷನ್ ಆಗಿದೆ ಎಂಬುವುದನ್ನು ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು.
ಹೀಗಾಗಿಯೇ ಕ್ರಾಂತಿ ಚಿತ್ರದ ಗಳಿಕೆಯನ್ನೂ ಸಹ ನಿರ್ಮಾಪಕರು ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ ಕ್ರಾಂತಿ ಚಿತ್ರ ಸಮಾಧಾನಕರ ಗಳಿಕೆಯನ್ನು ಮಾಡಿದೆಯಾದರೂ ಈ ಹಿಂದಿನ ದರ್ಶನ್ ಸಿನಿಮಾಗಳ ಹಾಗೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯನ್ನೇನೂ ಎಬ್ಬಿಸಲಿಲ್ಲ. ಇದೀಗ ದರ್ಶನ್ ಅಭಿಮಾನಿಗಳ ಚಿತ್ತ ತರುಣ್ ಸುಧೀರ್ ನಿರ್ದೇಶನದ ಮುಂದಿನ ಚಿತ್ರ ಕಾಟೇರ ಮೇಲಿದೆ.
ಕಳೆದ ವಾರವಷ್ಟೇ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದ್ದು, ಮೋಷನ್ ಪೋಸ್ಟರ್ ವಿನ್ಯಾಸ ಹಾಗೂ ಗುಣಮಟ್ಟ ಕಂಡು ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದು, ಕ್ವಾಲಿಟಿ ಮೇಕಿಂಗ್ ಸಿನಿಮಾ ಬರುವುದು ಪಕ್ಕಾ ಎನ್ನಬಹುದು.