ಯೋಗರಾಜ್​ ಭಟ್​ ಸಿನಿಮಾದಲ್ಲಿ ನಟಿಸೋ ಆಫರ್​ ಗಿಟ್ಟಿಸಿಕೊಂಡ 'ಬಿಗ್​ ಬಾಸ್'​ ದಿವ್ಯಾ ಉರುಡುಗ

ಯೋಗರಾಜ್​ ಭಟ್​ ಸಿನಿಮಾದಲ್ಲಿ ನಟಿಸೋ ಆಫರ್​ ಗಿಟ್ಟಿಸಿಕೊಂಡ 'ಬಿಗ್​ ಬಾಸ್'​ ದಿವ್ಯಾ ಉರುಡುಗ
ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲ್ಮ್ಸ್​ ಜಂಟಿ ನಿರ್ಮಾಣದಲ್ಲಿ 'ಪದವಿಪೂರ್ವ' ಸಿನಿಮಾ ಮೂಡಿ ಬರುತ್ತಿದೆ. ಹರಿಪ್ರಸಾದ್ ಜಯಣ್ಣ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಪ್ರವೇಶ ಪಡೆದುಕೊಂಡಿದ್ದಾರೆ.

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ರನ್ನರ್​ ಅಪ್​ ದಿವ್ಯಾ ಉರುಡುಗ ಅವರಿಗೆ ಸಾಕಷ್ಟು ಖ್ಯಾತಿ ಸಿಕ್ಕಿದೆ. ಈ ಮೊದಲು ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ ಈಗ ಆಫರ್​ಗಳ ಸಂಖ್ಯೆ ಹೆಚ್ಚಿದೆ. ಸಾಕಷ್ಟು ನಿರ್ಮಾಪಕರು ದಿವ್ಯಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಕಥೆ ಹಾಗೂ ಪಾತ್ರ ಉತ್ತಮವಾಗಿದ್ದರೆ ಮಾತ್ರ ಅವರು ಚಿತ್ರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ನಿರ್ದೇಶಕ ಯೋಗರಾಜ್​ ಭಟ್​ ಅವರ ಸಿನಿಮಾದಲ್ಲಿ ನಟಿಸೋ ಅವಕಾಶವನ್ನು ಅವರು ಗಿಟ್ಟಿಸಿಕೊಂಡಿದ್ದಾರೆ. ಈ ವಿಚಾರ ಕೇಳಿ ದಿವ್ಯಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲ್ಮ್ಸ್​ ಜಂಟಿ ನಿರ್ಮಾಣದಲ್ಲಿ 'ಪದವಿಪೂರ್ವ' ಸಿನಿಮಾ ಮೂಡಿ ಬರುತ್ತಿದೆ. ಹರಿಪ್ರಸಾದ್ ಜಯಣ್ಣ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಪ್ರವೇಶ ಪಡೆದುಕೊಂಡಿದ್ದಾರೆ. ಅವರು ಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಯೋಗರಾಜ್​ ಭಟ್​ ಅವರ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ದಿವ್ಯಾ ಖುಷಿ ಪಟ್ಟಿದ್ದಾರೆ. ದಿವ್ಯಾ ಅವರು ನಟಿಸಲಿರುವ ಕಥೆಯ ಚಿತ್ರೀಕರಣ ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ನಡೆಯಲಿದೆ. ಈಗಾಗಲೇ ನಾಲ್ಕು ಹಂತದಲ್ಲಿ ಶೂಟಿಂಗ್​ ಮುಗಿದಿದ್ದು, ಐದನೇ ಹಂತದ ಚಿತ್ರೀಕರಣಕ್ಕೆ ತಂಡ ಸಕಲ ಸಿದ್ಧತೆ ನಡೆಸಿದೆ.

ಈ ಸಿನಿಮಾದಲ್ಲಿ ಹೊಸಬರಿಗೆ ಮಣೆ ಹಾಕಲಾಗಿದೆ. ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 'ಪದವಿಪೂರ್ವ' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಇದ್ದು ಸಾಕಷ್ಟು ನಿರೀಕ್ಷೆ ಇದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಮಧು ತುಂಬಕೆರೆಯ ಸಂಕಲನ ಚಿತ್ರಕ್ಕಿದೆ.