ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರನ ಪಾಲಿಗೆ ಇದು ದೊಡ್ಡ ಐಪಿಎಲ್ ಆವೃತ್ತಿಯಾಗಲಿದೆ: ರಿಕಿ ಪಾಂಟಿಂಗ್

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಇರುವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ತಮ್ಮ ತಂಡದ ಓರ್ವ ಯುವ ಆಟಗಾರನ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಬಗ್ಗೆ ಮಾತನಾಡಿರುವ ರಿಕಿ ಪಾಂಟಿಂಗ್ ಈ ಬಾರಿಯ ಐಪಿಎಲ್ ಟೂರ್ನಿ ಪೃಥ್ವಿ ಶಾ ಅವರಿಗೆ ಅತ್ತಯುತ್ತಮ ಟೂರ್ನಿ ಎನಿಸಲಿದೆ ಎಂದಿದ್ದಾರೆ.
ಪೃಥ್ವಿ ಶಾ ಕಳೆದ ಕೆಲ ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿದ್ದು ತಂಡದ ಪರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರ ಎನಿಸಿದ್ದಾರೆ. ಆರಂಭಿಕನಾಗಿ ಪೃಥ್ವಿ ಶಾ ಅತ್ಯುತ್ತಮ ಆರಂಭವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 2021ರ ಐಪಿಎಲ್ ಆವೃತ್ತಿ ಶಾ ಪಾಲಿಗೆ ಈವರೆಗಿನ ಅತ್ಯುತ್ತಮ ಅವೃತ್ತಿ ಎನಿಸಿದ್ದು ಆ ಟೂರ್ನಿಯಲ್ಲಿ ಶಾ 15 ಪಂದ್ಯಗಳಲ್ಲಿ 31.93ರ ಸರಾಸರಿಯಲ್ಲಿ 479ರನ್ ಗಳಿಸಿದ್ದರು.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ರಿಷಭ್ ಪಂತ್ ಗಾಯದ ಕಾರಣದಿಂದಾಗಿ ಅಲಭ್ಯವಾಗಲಿದ್ದು ಅವರ ಗೈರಿನಲ್ಲಿ ಪೃಥ್ವಿ ಶಾ ಅವರಂತಾ ಭರವಸೆ ಆಟಗಾರರ ಪ್ರದರ್ಶನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಿರ್ಣಾಯಕವಾಲಿದೆ. ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ತಂಡಗಳ ಪೈಕಿ ಡೆಲ್ಲಿ ಪ್ರಾಂಚೈಸಿ ಕೂಡ ಒಂದು ಎನಿಸಿದ್ದು ಟ್ರೋಫಿಯ ಕನಸು ನಿಜವಾಗಬೇಕಿದ್ದಲ್ಲಿ ಪೃಥ್ವಿ ಶಾ ಪ್ರದರ್ಶನ ಡಿಸಿ ಪಡೆಗೆ ಅತ್ಯಂತ ಮಹತ್ವದ್ದಾಗಿರಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಿಕಿ ಪಾಂಟಿಂಗ್ ಮುಂಬೈ ಮೂಲದ ಬ್ಯಾಟರ್ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಬವಿಷ್ಯ ನುಡಿದಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಿಕಿ ಪಾಂಟಿಂಗ್ ಈ ಬಾರಿ ದೈಹಿಕವಾಗಿ ಪೃಥ್ವಿ ಶಾ ಉತ್ತಮವಾಗಿದ್ದು ಈ ಆವೃತ್ತಿಯಲ್ಲಿ ನಿಜವಾದ ಪೃಥ್ವಿ ಶಾ ಅವರನ್ನು ನೋಡಲಿದ್ದೀರಿ ಎಂದಿದ್ದಾರೆ. ಐಪಿಎಲ್‌ನಲ್ಲಿ ಡಿಸಿ ಆರಂಭಿಕ ಯುವ ಆಟಗಾರನಿಗೆ ಇದು ಅತ್ಯುತ್ತಮ ಐಪಿಎಲ್ ಆವೃತ್ತಿಯಾಗಲಿದೆ ಎಂದಿದ್ದಾರೆ ರಿಕಿ ಪಾಂಟಿಂಗ್.
"ನನ್ನ ಪ್ರಕಾರ ಈ ಬಾರಿ ನಾವು ನಿಜವಾದ ಪೃಥ್ವಿ ಶಾ ಅವರನ್ನು ನೋಡಲಿದ್ದೇವೆ. ಈ ಹಿಂದೆಂದೂ ನೋಡದಷ್ಟು ಅತ್ಯುತ್ಯಮವಾಗಿ ದೈಥಹಿಕವಾಗಿ ಅವರು ಸಮರ್ಥವಾಗಿದ್ದಾರೆ. ಅವರ ವರ್ತನೆ ಅವರ ಶೈಲಿಯ ವಿಚಾರವಾಗಿ ನಾನು ಈ ಹಿಂದೆ ಅವರೊಂದಿಗೆ ಮಾತನಾಡಿದ್ದು ಹೇಗೆ ಬದಲಾವಣೆಗಳು ಆಗುತ್ತವೆ ಎಂದು ತಿಳಿಸಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಅವರ ಪಾಲಿಗೆ ಅತ್ಯುತ್ತಮ ಐಪಿಎಲ್ ಆವೃತ್ತಿಯಾಗಲಿದೆ ಎಂದು ವಿಶ್ವಾಸವಿದೆ. ಈ ವರ್ಷ ಅವರ ಮುಂದೆ ವಿಶೇಷವಾದ ಗುರಿಯಿದೆ. ಅವರು ಹಿಂದೆಂದಿಗಿಂತಲೂ ಹೆಚ್ಚು ರನ್ ದಾಹ ಹೊಂದಿದ್ದಾರೆ" ಎಂದಿದ್ದಾರೆ ರಿಕಿ ಪಾಂಟಿಂಗ್.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಅಪಘಾತದಲ್ಲಿ ಗಾಯಗೊಂಡಿರುವ ಕಾರಣ ಟೂರ್ನಿಗೆ ಅಲಭ್ಯವಾಗಿದ್ದು ಪ್ರಸ್ತುತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಖಾಯಂ ನಾಯಕ ಪಂತ್ ಅಲಭ್ಯತೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಣಕ್ಕೆ ಇಳಿಯಲಿದೆ.