ಮಹದಾಯಿ ಯೋಜನೆಗೆ 1000 ಕೋಟಿ ರೂ. ಅನುದಾನ : ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಎರಡನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.ಈ ಬಜೆಟ್ ಮುಂದಿನ 25 ವರ್ಷ ದೂರದೃಷ್ಟಿ ಹೊಂದಿದೆ.
ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ, ಕಾಡಾನೆ ಹಾವಳಿ ತಡೆಗೆ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ರಚಿಸಿರುವ ಕಾಡಾನೆ ಕಾರ್ಯಪಡೆ ಮೈಸೂರು ಹಾಗೂ ಮಂಡ್ಯಕ್ಕೂ ವಿಸ್ತರಣೆ ಮಾಡಿ ಹೊಸದಾಗಿ 199 ಸಿಬ್ಬಂದಿ ನೇಮಕಾತಿ ಮಾಡಲಾಗುವುದು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಹಳ್ಳಿ ಮುತ್ತು ಯೋಜನೆ, ಗ್ರಾಮೀಣಾ ಭಾಗದ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮುತ್ತು ಯೋಜನೆ, ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಹಾಯ, ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಂಪೂರ್ಣ ಶುಲ್ಕ 500 ಅತ್ಯುತ್ತಮ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸಮಾಜದ ಏಳಿಗೆಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕತೆ ವಲಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು. ಕಾರ್ಯಕರ್ತೆಯರು, ಹಾಗೂ ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಮತ್ತು ಗ್ರಂಥಪಾಲಕರ ಸೇವೆಯನ್ನು ಗುರುತಿಸಿ, ಅವರಿಗೆ ನೀಡುವ ಮಾಸಿಕ ಗೌರವಧನವನ್ನು 1,000 ರೂ. ದಂತೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ರಾಜ್ಯದ 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ 725 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. 2022-23ನೇ ಸಾಲಿನಲ್ಲಿ ಈ ಸೌಲಭ್ಯವನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರು ಹಾಗೂ ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯನ್ನು ರಾಜ್ಯದ ಸಿಂಪಿಗರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರು ಸ್ವಯಂಉದ್ಯೋಗ ಕೈಗೊಳ್ಳಲು ವಿದ್ಯುತ್ ಚಾಲಿತ ತ್ರಿಚಕ್ರ ಸರಕು ವಾಹನ ಖರೀದಿಗೆ 50 ಸಾವಿರ ರೂ. ಧನ ಸಹಾಯ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯನ್ನು ಮುಂದುವರೆಸಿ ಬಾಬು ಜಗಜೀವನರಾಮ್ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಎಲೆಕ್ರಿಕ್ ತಿಚಕ್ರ ಅಥವಾ ನಾಲ್ಕು ಚಕ್ರದ ಸರಕು ವಾಹನಗಳನ್ನು ಖರೀದಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಫಲಾನುಭವಿಗಳಿಗೆ ಶೇ.50 ರಷ್ಟು 2 ಲಕ್ಷ ರೂ. ವರೆಗೂ ಸಹಾಯಧನವನ್ನು ನೀಡಲಾಗುವುದು, ಇದಕ್ಕಾಗಿ 400 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ: 30.05.2022 ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಪ್ರೋತ್ಸಾಹಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಉದ್ದೇಶಕ್ಕೆ ಹಿಂದಿನ ವರ್ಷದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಅವಕಾಶ ಮಾಡಲಾಗಿತ್ತು ಹಾಗೂ ಸಹಕಾರ ವಲಯದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲು ಅವಕಾಶ ನೀಡಲಾಗಿದೆ. ಧೈಯೋದ್ದೇಶವನ್ನು ಮುಂದುವರೆಸುತ್ತಾ ನಮ್ಮ ಸರ್ಕಾರವು 'ಗೃಹಿಣಿ ಶಕ್ತಿ' ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಇದರಡಿಯಲ್ಲಿ ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಶ್ರಮಿಸುವ ಮಹಿಳಾ ಕೃಷಿ ಕಾರ್ಮಿಕರ ಕುರಿತು ನಮ್ಮ ಸರ್ಕಾರ ಹೊಂದಿರುವ ಕಾಳಜಿಯ ಪ್ರತೀಕವಾಗಿ, ಶ್ರಮ ಶಕ್ತಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ ರಾಜ್ಯ ಸರ್ಕಾರವು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಗಳ ಸಹಾಯ ಧನವನ್ನು ಡಿ.ಬಿ.ಟಿ. ಮೂಲಕ ನೀಡಲಿದೆ.
ರಾಜ್ಯದ ಎಲ್ಲಾ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾಶಕ್ತಿ ಯೋಜನೆ ಜಾರಿಗೆ ತರಲಾಗುವುವುದು. ಎಲ್ಲ ವಿವಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆಗೆ ವ್ಯವಸ್ಥೆ, ಶಾಲೆಗಳಲ್ಲಿ ರೀಡಿಂಗ್ ಕಾರ್ನರ್ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಕೃಷಿ ನೀರಾವರಿ ಯೋಜನೆಗಳಿಗೆ ಮಹತ್ವದ ಘೋಷಣೆ ಮಾಡಲಾಗಿದ್ದು, ಮಹದಾಯಿ ಯೋಜನೆಗೆ 1000 ಕೋಟಿ ರೂ. ಕಳಸಾ ಬಂಡೂರಿ ಯೋಜನೆ 80 ಕೋಟಿ ರೂ. ಗಂಗಾ ಕಲ್ಯಾಣ ಯೋಜನೆಗೆ 675 ಕೋಟಿ ರೂ. ಹಾಗೂ ನರೇಗಾ ಯೋಜನೆ 1000 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.