ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ

ಚೇತೇಶ್ವರ ಪೂಜಾರ ಭಾರತ ಟೆಸ್ಟ್ ತಂಡದ ಪ್ರಮುಖ ಬ್ಯಾಟರ್. ಚೇತೇಶ್ವರ ಪೂಜಾರ ಸಾಕಷ್ಟು ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಹಲವು ಬಾರಿ ಟೀಕೆಗೊಳಗಾಗಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪೂಜಾರ ವೇಗವಾಗಿ ರನ್ ಗಳಿಸುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಪೂಜಾರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಚೇತೇಶ್ವರ ಪೂಜಾರ ಅವರ ನಿಧಾನಗತಿಯ ಬ್ಯಾಟಿಂಗ್ ಕುರಿತಂತೆ ಭಾರತದ ಕೋಚ್ ಆಗಿದ್ದ ರವಿಶಾಸ್ತ್ರಿ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಟೀಂ ಇಂಡಿಯಾ ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
2019ರ ಅಕ್ಟೋಬರ್ ತಿಂಗಳಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಆಸಕ್ತಿಕರ ಘಟನೆ ನಡೆದಿದೆ. ಪೂಜಾರ ನಿಧಾನಗತಿಯ ಬ್ಯಾಟಿಂಗ್ ಕಂಡು ಹತಾಶರಾಗಿದ್ದ ರವಿಶಾಸ್ತ್ರಿ ಬದಲೀ ಫೀಲ್ಡರ್ ಮೂಲಕ ಸಂದೇಶವನ್ನು ಕಳಿಸಿದ್ದರು ಎಂದು ತಮ್ಮ 'ಕೋಚಿಂಗ್ ಬಿಯಾಂಡ್' ಪುಸ್ತಕದಲ್ಲಿ ದಾಖಲಿಸಿದ್ದಾರೆ.
ವೇಗವಾಗಿ ಸ್ಕೋರ್ ಮಾಡಬೇಕೆಂದು ಬಯಸಿದ್ದ ರವಿಶಾಸ್ತ್ರಿ
"ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಇಬ್ಬರೂ ವೇಗವಾಗಿ ರನ್ ಗಳಿಸಬೇಕು ಎಂದು ರವಿಶಾಸ್ತ್ರಿ ಬಯಸಿದ್ದರು. ಇಬ್ಬರೂ ಬ್ಯಾಟರ್ ಗಳಿಗೆ ಆ ಸಾಮರ್ಥ್ಯ ಇದೆ ಎಂದು ರವಿಶಾಸ್ತ್ರಿ ನಂಬಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಬ್ಬರೂ ಸಾಕಷ್ಟು ಅನುಭವಿ ಬ್ಯಾಟರ್ ಆಗಿದ್ದರು. ಅವರಿಗೆ ಆ ಸಾಮರ್ಥ್ಯ ಇದೆ ಎಂದು ಮನವರಿಕೆ ಮಾಡಿಕೊಡುವ ಉದ್ದೇಶವಿತ್ತು." ಎಂದು ಶ್ರೀಧರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಅದೇ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ ಗಳಿಸಿದ್ದರು. ಉತ್ತಮವಾಗಿ ರನ್ ಗಳಿಸುತ್ತಿದ್ದರು. ಆದರೆ ಇನ್ನೊಂದು ಬದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪೂಜಾರ 61 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಇದರಿಂದ ಹತಾಶರಾದ ರವಿಶಾಸ್ತ್ರಿ ಪೂಜಾರಗೆ ಸಂದೇಶವನ್ನು ಕಳಿಸಬೇಕಾಯಿತು.
ಲೂನಾ ಸವಾರಿ ನಿಲ್ಲಿಸು ಎಂದ ರವಿಶಾಸ್ತ್ರಿ
"ನಾವು ವೇಗವಾಗಿ ರನ್‌ಗಳನ್ನು ಗಳಿಸಲು ಬಯಸಿದ್ದೆವು, ಒಂದು ಕಡೆ ರೋಹಿತ್ ಶರ್ಮಾ ಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದರೆ, ಮತ್ತೊಂದೆಡೆ ಪೂಜಾರ ರನ್ ಗಳಿಸಲು ಪರದಾಡುತ್ತಿದ್ದರು. ಬದಲೀ ಫೀಲ್ಡರ್ ಮುಖಾಂತರ ಪೂಜಾರಗೆ ಸಂದೇಶವನ್ನು ಕಳಿಸಿದರು. "ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು, ಹಾರ್ಲೆ-ಡೇವಿಡ್‌ಸನ್‌ನಲ್ಲಿ ಹೋಗು" ಎಂದು ಹೇಳಿ ಕಳಿಸಿದ್ದರು.
ಅದರ ನಂತರ ಪೂಜಾರ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 61 ಎಸೆತಗಳಲ್ಲಿ 8 ರನ್ ಗಳಿಸಿದ್ದ ಅವರು ನಂತರ 148 ಎಸೆತಗಳಲ್ಲಿ 12 ಬೌಂಡರಿ 1 ಸಿಕ್ಸರ್ ಸಹಿತ 81 ರನ್ ಗಳಿಸಿದರು. ಭಾರತ ಈ ಪಂದ್ಯವನ್ನು 203 ರನ್‌ಗಳಿಂದ ಗೆದ್ದುಕೊಂಡಿತ್ತು.