ಸರಣಿಯ ಕೊನೆಯ ಪಂದ್ಯದಲ್ಲಿ 7 ರನ್‌ಗಳ ರೋಚಕ ಜಯ: ಸರಣಿ ಗೆದ್ದು ಬೀಗಿದ ವೆಸ್ಟ್ ಇಂಡೀಸ್
ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ವಿಶ್ವದಾಖಲೆಯ 259 ರನ್‌ಗಳ ಗುರಿಯನ್ನು ಚೇಸ್ ಮಾಡಿ ಗೆದ್ದಿದ್ದ ದಕ್ಷಿಣ ಆಫ್ರಿಕಾ ಮೂರನೇ ಪಂದ್ಯದಲ್ಲಿ ಮತ್ತೊಂದು ದೊಡ್ಡ ಮೊತ್ತವನ್ನು ಚೇಸ್ ಮಾಡುವಲ್ಲಿ ವಿಫಲವಾಗಿದೆ.
ಸರಣಿಯ ನಿರ್ಣಾಯಕ ಪಂದ್ಯದಲ್ಲಿ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಕೆರಿಬಿಯನ್ ಪಡೆ ಸರಣಿಯನ್ನು ಗೆದ್ದು ಸಂಭ್ರಮಿಸಿದೆ.
ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಉತ್ತಮ ಆರಂಭವನ್ನೇ ಪಡೆಯಿತು. 3.2 ಓವರ್ ಗಳಲ್ಲಿ ಮೊದಲ ವಿಕೆಟ್‌ಗೆ 39 ರನ್ ಜೊತೆಯಾಟ ಬಂದಿತು.
ಕೈಲ್ ಮೇಯರ್ಸ್ 10 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಜಾನ್ಸನ್ ಚಾರ್ಲ್ಸ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬ್ರಾಂಡನ್ ಕಿಂಗ್ 25 ಎಸೆತಗಳಲ್ಲಿ 36 ರನ್ ಗಳಿಸಿದರೆ, ನಿಕೋಲಸ್ ಪೂರನ್ 19 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ 41 ರನ್ ಗಳಿಸಿ ಮಿಂಚಿದರು.
ರೋವ್ಮಮ್ ಪೊವೆಲ್ 4 ಎಸೆತಗಳಲ್ಲಿ 11 ರನ್ ಗಳಿಸಿದರೆ, ರೇಮನ್ ರೀಫರ್ 18 ಎಸೆತಗಳಲ್ಲಿ 27 ರನ್ ಗಳಿಸಿ ರನೌಟ್ ಆದರು. ರೊಮಾರಿಯೋ ಶೆಫರ್ಡ್ ಕೊನೆಯ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದರು. 22 ಎಸೆತಗಳಲ್ಲಿ 2 ಬೌಂಡರಿ ಮೂರು ಸಿಕ್ಸರ್ ಸಹಿತ 44 ರನ್ ಗಳಿಸಿ ವೆಸ್ಟ್ ಇಂಡೀಸ್ 200 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು.
ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಲುಂಗಿ ಎನ್‌ಗಿಡಿ, ಕಗಿಸೋ ರಬಾಡಾ, ಅನ್ರಿಚ್ ನೊಕಿಯಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ನಾಯಕ ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದುಕೊಂಡರು.
ರೀಜಾ ಹೆಂಡ್ರಿಕ್ಸ್ ಹೋರಾಟ ವ್ಯರ್ಥ
ಮತ್ತೊಂದು ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ, ಸ್ಫೋಟಕ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಗೆಲುವಿಗೆ ಕಾರಣವಾಗಿದ್ದ ಕ್ವಿಂಟನ್ ಡಿ ಕಾಕ್ 21 ಎಸೆತಗಳಲ್ಲಿ 21 ರನ್ ಗಳಿಸಿ ನಿರ್ಗಮಿಸಿದರು.
ರೀಜಾ ಹೆಂಡ್ರಿಕ್ಸ್ 44 ಎಸೆತಗಳಲ್ಲಿ 11 ಬೌಂಡರಿ 2 ಸಿಕ್ಸರ್ ಸಹಿತ 83 ರನ್ ಗಳಿಸಿದರು, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ರಿಲೀ ರೊಸ್ಸೊ 21 ಎಸೆತಗಳಲ್ಲಿ 42 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ 11 ಎಸೆತಗಳಲ್ಲಿ 11 ರನ್ ಗಳಿಸಿದರು. ನಾಯಕ ಐಡೆನ್ ಮಾರ್ಕ್ರಾಮ್ 18 ಎಸೆತಗಳಲ್ಲಿ ಅಜೇಯ 35 ರನ್ ಗಳಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 213 ರನ್ ಗಳಿಸುವ ಮೂಲಕ 7 ರನ್‌ಗಳ ಸೋಲನುಭವಿಸಿದೆ.
ಉಭಯ ತಂಡಗಳ ಆಡುವ ಬಳಗ
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಅನ್ರಿಚ್ ನೊಕಿಯಾ, ವೇಯ್ನ್ ಪಾರ್ನೆಲ್, ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ಜೋರ್ನ್ ಪೋರ್ಚುನ್.
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೇಮನ್ ರೀಫರ್, ರೊಮಾರಿಯೋ ಶೆಫರ್ಡ್, ಶೆಲ್ಡನ್ ಕಾಟ್ರೆಲ್, ಅಲ್ಜಾರಿ ಜೋಸೆಫ್, ಶೆಲ್ಡನ್ ಕಾಟ್ರೆಲ್.