ಪುರುಷರಿಗಿಂತ ಮಹಿಳೆಯರಿಗೆ ಕಡಿಮೆ ಕೂಲಿ; ನಗರ-ಗ್ರಾಮೀಣ ಭಾಗಗಳಲ್ಲಿ ಅಸಮಾನತೆ

ಪುರುಷರಿಗಿಂತ ಮಹಿಳೆಯರಿಗೆ ಕಡಿಮೆ ಕೂಲಿ; ನಗರ-ಗ್ರಾಮೀಣ ಭಾಗಗಳಲ್ಲಿ ಅಸಮಾನತೆ

ವದೆಹಲಿ: ಒಂದೇ ರೀತಿಯ ಕೆಲಸ ಮಾಡಿದರೂ ಪುರುಷರು ಮತ್ತು ಮಹಿಳೆಯರಿಗೆ ನೀಡುವ ಕೂಲಿಯಲ್ಲಿ ವ್ಯತ್ಯಾಸ ಇದ್ದು, ನಗರ ಮತ್ತು ಗ್ರಾಮೀಣ ಭಾಗಗಳೆರಡರಲ್ಲೂ ಈ ತಾರತಮ್ಯ ಕಂಡುಬಂದಿದೆ. ನಗರ ಭಾಗಗಳಲ್ಲಿ ಈ ಅಂತರ ಸ್ವಲ್ಪ ಮಟ್ಟಿಗೆ ತಗ್ಗಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಳವಳಕಾರಿ ಸಂಗತಿ '2022ರಲ್ಲಿ ಭಾರತದಲ್ಲಿ ಪುರುಷ ಮತ್ತು ಮಹಿಳೆ' ಎಂಬ ಅಧ್ಯಯನ ವರದಿಯಲ್ಲಿ ದಾಖಲಾಗಿದೆ.

ರಾಷ್ಟ್ರೀಯ ಅಂಕಿಸಂಖ್ಯೆಗಳ ಕಚೇರಿ (ಎನ್​ಎಸ್​ಒ) ಇದನ್ನು ಬಿಡುಗಡೆ ಮಾಡಿದೆ.

2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಮಹಿಳಾ ಕೂಲಿಯು ಪುರುಷರಿಗೆ ನೀಡುವ ದಿನಗೂಲಿಯಲ್ಲಿ ಶೇ. 50ಕ್ಕಿಂತ ತುಸು ಹೆಚ್ಚಿನಿಂದ ಶೇ. 93.7ರ ಒಳಗೆ ಇದೆ. ನಗರಗಳಲ್ಲಿ ಶೇ. 50ಕ್ಕಿಂತ ಸ್ವಲ್ಪ ಕಡಿಮೆಯಿಂದ ಶೇ. 100.8ರಷ್ಟಿದೆ.

ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಕಚೇರಿಯ (ಎನ್​ನ್‌ಎಸ್​ಎಸ್​ಓ) 68ನೇ ಸುತ್ತಿನ ವರದಿ ಯೊಂದಿಗೆ (2011 ಜುಲೈ-2012 ಜೂನ್) ಈ ದಿನಗೂಲಿಗಳನ್ನು ಹೋಲಿಕೆ ಮಾಡಿದಾಗ, ಗ್ರಾಮೀಣ ಭಾಗಗಳಲ್ಲಿ ಕೂಲಿಯಲ್ಲಿ ಲಿಂಗ ತಾರತಮ್ಯ ಹೆಚ್ಚಿರುವುದು ಕಂಡು ಬಂದಿದೆ. ಆದರೆ, ಕಳೆದ ಒಂದು ದಶಕದಲ್ಲಿ ನಗರ ಭಾಗಗಳಲ್ಲಿ ಈ ವಿಚಾರದಲ್ಲಿ ಅಂತರ ಸ್ವಲ್ಪ ಕಡಿಮೆಯಾಗಿದೆ.

ದೊಡ್ಡ ರಾಜ್ಯಗಳ ಪೈಕಿ ಕೇರಳದಲ್ಲಿ ವೇತನ ತಾರ ತಮ್ಯವು ಗ್ರಾಮೀಣ ಮತ್ತು ನಗರ ಭಾಗಗಳೆರಡರಲ್ಲೂ ಹೆಚ್ಚಾಗಿದೆ. ಗ್ರಾಮೀಣ ಪುರುಷರ ದೈನಿಕ ಸರಾಸರಿ ಕೂಲಿ 842 ರೂಪಾಯಿ ಸಿಗುತ್ತದೆ. ಇದು ಇಡೀ ದೇಶದಲ್ಲೇ ಅಧಿಕ ಕೂಲಿಯಾಗಿದೆ. ಆದರೆ ಈ ರಾಜ್ಯದ ಸ್ತ್ರೀ ಕೂಲಿಗಾರರ ದಿನಗೂಲಿ 434 ರೂಪಾಯಿ ಇದೆೆ. ಇದು ಕೂಡ ದೊಡ್ಡ ರಾಜ್ಯಗಳ ಪೈಕಿ ಮಹಿಳಾ ಕೂಲಿಯವರಿಗೆ ಸಿಗುವ ಅತಿ ಹೆಚ್ಚಿನ ವೇತನವಾಗಿದ್ದರೂ ಪುರುಷರಿಗೆ ದೊರೆಯುವ ಕೂಲಿಗಿಂತ ಶೇ. 51.5ರಷ್ಟಾಗಿದೆ ಎಂಬುದನ್ನು ವರದಿ ತೋರಿಸಿದೆ. ಗ್ರಾಮೀಣ ಭಾಗದ ಪುರುಷರಿಗೆ ದಿನಗೂಲಿ ಅಧಿಕವಾಗಿರುವ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೂಡ ಪುರುಷ ಮತ್ತು ಸ್ತ್ರೀ ವೇತನ ನಡುವಿನ ಅಂತರ ಅಗಾಧವಾಗಿದೆ. ಈ ರಾಜ್ಯಗಳಲ್ಲಿ ಹೆಣ್ಣಾಳುಗಳ ಕೂಲಿ ಗಂಡಾಳಿಗಿಂತ ಶೇ. 60ಕ್ಕಿಂತ ಕಡಿಮೆಯಾಗಿದೆ.

ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಒಡಿಶಾದಲ್ಲಿ ಮಹಿಳಾ ಕಾರ್ವಿುಕರು ಪುರುಷರಿಗಿಂತ ಶೇ. 70ರಷ್ಟು ಕಡಿಮೆ ಕೂಲಿ ಪಡೆಯುತ್ತಾರೆ. ಪುರುಷರ ಕೂಲಿ ಅಧಿಕವಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ಐದು ರಾಜ್ಯಗಳಲ್ಲಿ ದಿನಗೂಲಿ 400 ರೂ.ಗಿಂತ ಕಡಿಮೆ ಯಿದೆ. ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಪುರುಷರ ದಿನಗೂಲಿ 400 ರೂ.ಗಿಂತ ಜಾಸ್ತಿಯಿದೆ.