ಕೈಲ್ ಜೇಮಿಸನ್ ಬದಲಾಗಿ ಸಿಎಸ್‌ಕೆ ತಂಡಕ್ಕೆ ಆಯ್ಕೆಯಾದ ದಕ್ಷಿಣ ಆಫ್ರಿಕಾ ಬೌಲರ್

2023ರ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಪ್ರಮುಖ ಬೌಲರ್ ಕೈಲ್ ಜೇಮಿಸನ್ ಹೊರಬಿದ್ದಿದ್ದು, ಅವರ ಬದಲಾಗಿ ದಕ್ಷಿಣ ಆಫ್ರಿಕಾದ ಬೌಲಿಂಗ್ ಆಲ್‌ರೌಂಡರ್ ಸಿಸಾಂಡ ಮಗಾಲ ಆಯ್ಕೆಯಾಗಿದ್ದಾರೆ.
ಸಿಸಾಂಡ ಮಗಾಲ ದಕ್ಷಿಣ ಆಫ್ರಿಕಾದ ಬಲಗೈ ವೇಗಿಯಾಗಿದ್ದು ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಸಿಸಾಂಡ ಮಗಾಲ ದಕ್ಷಿಣ ಆಫ್ರಿಕಾ ಪರವಾಗಿ ಕೇವಲ 5 ಏಕದಿನ ಪಂದ್ಯಗಳನ್ನಾಡಿದ್ದು, 4 ಟಿ20 ಪಂದ್ಯಗಳನ್ನಾಡಿದ್ದರು. 5 ಪಂದ್ಯಗಳಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್ ಪಡೆದುಕೊಂಡಿದ್ದಾರೆ. 4 ಟಿ20 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಸಿಸಾಂಡ ಮಗಾಲ ಅತಿ ಶೀಘ್ರದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಕೈಲ್ ಜೇಮಿಸನ್ ಬೆನ್ನು ಒತ್ತಡದ ಮುರಿತಕ್ಕೆ ಒಳಗಾದ ಕಾರಣ ಅವರು ಅನಿವಾರ್ಯವಾಗಿ ಐಪಿಎಲ್‌ನಿಂದ ಹೊರಬಿದ್ದರು. 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಒಂದು ಕೋಟಿ ರುಪಾಯಿ ನೀಡಿ ಸಿಎಸ್‌ಕೆ ಜೇಮಿಸನ್‌ರನ್ನು ಖರೀದಿ ಮಾಡಿತ್ತು.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಮುನ್ನ ಗಾಯ
2022ರ ಜೂನ್ ತಿಂಗಳಿನಿಂದ ಅವರು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಎಂಟು ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿರಲಿಲ್ಲ. ಫೆಬ್ರವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯಕ್ಕೆ ಮುನ್ನ ಜೇಮಿಸನ್ ಮತ್ತೆ ಗಾಯಕ್ಕೆ ತುತ್ತಾಗಿದ್ದರು.
ಮೊದಲನೇ ಟೆಸ್ಟ್ ಪಂದ್ಯಕ್ಕೆ ಮುನ್ನ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿರುವುದನ್ನು ಬಹಿರಂಗಪಡಿಸಿದೆ. ಹೆಚ್ಚಿನ ಪರೀಕ್ಷೆಗಾಗಿ ಜೇಮಿಸನ್ ಕ್ರೈಸ್ಟ್‌ಚರ್ಚ್‌ಗೆ ತೆರಳಿದ್ದರು. ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಅವರ ಬೆನ್ನುಮೂಳ ಮುರಿದಿರುವುದು ಖಚಿತವಾದ ಬಳಿಕ ಐಪಿಎಲ್‌ನಿಂದ ಕೂಡ ಅವರು ಹೊರಗುಳಿದರು.
ಕೈಲ್ ಜೇಮಿಸನ್ ಬೆನ್ನು ಮೂಳೆ ಒತ್ತಡಕ್ಕೆ ಒಳಗಾಗದ ನಂತರ ಸಿಎಸ್‌ಕೆ ಬದಲೀ ಆಟಗಾರರನ್ನು ತರುವುದು ತಂಡಕ್ಕೆ ಅನಿವಾರ್ಯವಾಗಿದೆ. ಮಹೇಶ್ ತೀಕ್ಷಣ, ನಿಶಾಂತ್ ಸಿಂಧು, ತುಷಾರ್ ದೇಶಪಾಂಡೆ, ಮತ್ತು ಮಥೀಶ ಪತಿರಾನ ತಂಡದ ಬೌಲಿಂಗ್ ವಿಭಾಗದಲ್ಲಿದ್ದು, ಸಿಸಾಂಡ ಮಗಾಲ ತಂಡವನ್ನು ಸೇರಿಕೊಳ್ಳಲಿದ್ದಾರೆ.
ರವೀಂದ್ರ ಜಡೇಜಾ ನಾಯಕನಾಗಿ ಆಯ್ಕೆ
ಸಿಎಸ್‌ಕೆ ತಂಡ ಈಗಾಗಲೇ ಐಪಿಎಲ್‌ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ರವೀಂದ್ರ ಜಡೇಜಾರನ್ನು ತಂಡದ ನಾಯಕರನ್ನಾಗಿ ಮತ್ತೆ ನೇಮಕ ಮಾಡಲಾಗಿದೆ. ಧೋನಿ ಮತ್ತು ಇತರೆ ಆಟಗಾರರು ಈಗಾಗಲೇ ಚೆನ್ನೈನಲ್ಲಿದ್ದು ಅಭ್ಯಾಸ ಮಾಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಸಿಸಾಂಡ ಮಗಾಲ, ಅಜಯ್ ಮಂಡಲ್, ಭಗತ್ ವರ್ಮಾ.