ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ : 'IQRA' ಕಂಪನಿಯಿಂದ ಕೋಟ್ಯಂತರ ರೂ. ಪಂಗನಾಮ : ನಾಲ್ವರ ವಿರುದ್ಧ FIR

ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ : 'IQRA' ಕಂಪನಿಯಿಂದ ಕೋಟ್ಯಂತರ ರೂ. ಪಂಗನಾಮ : ನಾಲ್ವರ ವಿರುದ್ಧ FIR

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲಾಗಿದ್ದು, ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ವಂಚನೆ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ತಿಲಕ್​ನಗರದ ಸ್ವಾಗತ್ ರಸ್ತೆಯಲ್ಲಿರುವ ಇಕ್ರಾ (IQRA) ಕಂಪನಿಯು ಹತ್ತಾರು ಜನರಿಗೆ ವಂಚಿಸಿದೆ ಎಂದು ಆರೋಪಿಸಲಾಗಿದ್ದು, 4 ಕೋಟಿಯಷ್ಟು ಹಣವನ್ನು ಲಪಟಾಯಿಸಿದೆ ಎಂದು ಸಾರ್ವಜನಿಕರು ದೂರು ನೀಡಿದ್ಧಾರೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಪಿಗಳಾದ ಅಬ್ದುಲ್ ನಾಜೀಮ್ ಮೇಖ್ರಿ, ನಯೀಮ್ ಮೇಖ್ರಿ, ಹಿದಾಯತ್-ಉಲ್ಲಾ, ಅಲೀಂ ಮೇಖ್ರಿ ಅವರನ್ನ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ವಂಚನೆ ಹಿನ್ನೆಲೆಯಲ್ಲಿ ಸೈಯದ್ ಗುಲಾಬ್ ಎಂಬುವವರು ದೂರು ಕೊಟ್ಟಿದ್ದರು. ನಂತರ ತಿಲಕ್ ನಗರ ಠಾಣೆ ಪೊಲೀಸರು ಸಿಆರ್​ಪಿಸಿ ಸೆಕ್ಷನ್ 91ರ ಅಡಿಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು. ಇಕ್ರಾ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ವಂಚನೆಗೊಳಗಾದವರು ಠಾಣೆಗೆ ಬಂದು ಮಾಹಿತಿ ಕೊಡುವಂತೆ ನೋಟೀಸ್​ನಲ್ಲಿ ಮನವಿ ಮಾಡಲಾಗಿತ್ತು. ಪೊಲೀಸ್ ಪ್ರಕಟಣೆ ಬಳಿಕ 24ಕ್ಕೂ ಹೆಚ್ಚು ಜನರು ದೂರು ನೀಡಲು ಮುಂದೆ ಬಂದರು. ಸದ್ಯ ಇರುವ ಮಾಹಿತಿ ಪ್ರಕಾರ 2020ರಿಂದಲೂ 40ಕ್ಕೂ ಹೆಚ್ಚು ಜನರು ಇಕ್ರಾ ಕಂಪನಿಗೆ ಹಣ ಕೊಟ್ಟಿದ್ದಾರೆ. ಪ್ರತಿಯೊಬ್ಬರಿಂದ 4-10 ಲಕ್ಷದವರೆಗೂ ಹಣ ಪಡೆಯಲಾಗಿದೆ. ತಿಲಕ್ ನಗರದ ನಿವಾಸಿಯೊಬ್ಬರು 10 ಲಕ್ಷ ಹಣ ಕಳೆದುಕೊಂಡಿದ್ಧಾರೆ. ಮಹಾರಾಷ್ಟ್ರದ ನಾಗಪುರ ಮೂಲದ ಐದಾರು ಮಂದಿಗೆ ಲಕ್ಷಾಂತರ ರೂ ವಂಚನೆಯಾಗಿರುವುದು ತಿಳಿದುಬಂದಿದೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ…