ರಾಜ್ಯದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಮತಬೇಟೆ: ವಿಜಯಸಂಕಲ್ಪ ಯಾತ್ರೆಗಳ ಮಹಾಸಂಗಮ ಸಮಾವೇಶ

ಬೆಂಗಳೂರು/ದಾವಣಗೆರೆ: ಯುಗಾದಿ ಸಂಭ್ರಮದ ಜತೆಗೆ ಬಿಜೆಪಿ ಮತ್ತೊಂದು ಹಬ್ಬದ ಆಚರಣೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಾ.25 ರಂದು ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಮಲ ಪಡೆ ಪರವಾಗಿ ಮತಬೇಟೆಯಾಡಲಿದ್ದಾರೆ.
ಏನೇನು ಕಾರ್ಯಕ್ರಮ?: ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬರುವ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಗಣ್ಯರು ಸ್ವಾಗತಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಗೆ ತೆರಳುವರು. ಸರ್ ಎಂ. ವಿಶ್ವೇಶ್ವರಯ್ಯ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ, ಅಲ್ಲಿರುವ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡುವರು. ಆ ನಂತರ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಶೋಧನಾ ಕೇಂದ್ರ ಉದ್ಘಾಟಿಸುವರು. ಮಧ್ಯಾಹ್ನ 1ಕ್ಕೆ ಬೆಂಗಳೂರಿನ ವೈಟ್ಫೀಲ್ಡ್ಗೆ ಆಗಮಿಸುವ ಪ್ರಧಾನಿ, ಮೆಟ್ರೋ ಮಾರ್ಗ ಲೋಕಾರ್ಪಣೆ ಮಾಡಿ ಮೆಟ್ರೋದಲ್ಲಿ ಸಂಚರಿಸುವರು. ಮಧ್ಯಾಹ್ನ 3.20ಕ್ಕೆ ದಾವಣಗೆರೆಗೆ ತೆರಳಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪದ ಮಹಾ ಸಂಗಮದಲ್ಲಿ ಭಾಗವಹಿಸುವರು. ಕಾರ್ಯಕ್ರಮ ಮುಗಿದ ನಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸಾಗುವರು.
ಪ್ರಧಾನಿ ಕಾರ್ಯಾಲಯ ಅಲರ್ಟ್: ಮಂಡ್ಯದಲ್ಲಿ ಪ್ರಧಾನಿ ಮೋದಿ ಅವರಿಗೆ ಹೂಗುಚ್ಛ ನೀಡಿದವರ ಸಾಲಿನಲ್ಲಿ ರೌಡಿ ಶೀಟರ್ ಕಾಣಿಸಿದ್ದ ಹಿನ್ನೆಲೆಯಲ್ಲಿ ದಾವಣಗೆರೆ ಕಾರ್ಯಕ್ರಮ ದಲ್ಲಿ ಅಂತಹ ಪ್ರಮಾದ ನಡೆಯದಂತೆ ಖುದ್ದು ಪ್ರಧಾನಿ ಕಾರ್ಯಾಲಯವೇ ಎಚ್ಚರ ವಹಿಸಿದೆ. ಖುದ್ದು ಫಿಲ್ಡಿಗಿಳಿದಿರುವ ಪ್ರಧಾನಿ ಕಚೇರಿ ಅಧಿಕಾರಿಗಳು ಹೂಗುಚ್ಛ ನೀಡುವ 25 ಜನರ ಹೆಸರನ್ನು ವಾರದ ಹಿಂದೆಯೇ ತರಿಸಿಕೊಂಡು ಪೊಲೀಸ್ ಹಾಗೂ ಇಂಟಲಿಜೆನ್ಸ್ ಮೂಲಕ ಅವರ ಪೂರ್ವಾಪರ ಕಲೆ ಹಾಕಿದೆ. ಇವರಾರೂ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಎರಡೆರಡು ಬಾರಿ ಖಚಿತಪಡಿಸಿಕೊಂಡ ಬಳಿಕವೇ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದೆ. ಆದರೆ ಈವರೆಗೆ ಯಾರ ಹೆಸರನ್ನೂ ಬಹಿರಂಗ ಪಡಿಸಿಲ್ಲ.
ಬೆಳ್ಳಿ ಇಟ್ಟಿಗೆ ಕೊಡುಗೆ: ಅಯೋಧ್ಯೆ ರಾಮಮಂದಿರ ನಿರ್ವಣಕ್ಕೆ ತಯಾರಿಸಲಾದ 15 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ದಾವಣಗೆರೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರಿಗೆ ನೀಡಲು ನಿರ್ಧರಿಸಲಾಗಿದೆ. 2 ಕೆಜಿಯ ಬೆಳ್ಳಿ ಗದೆ ಕೂಡ ಕೊಡುಗೆಯ ಪಟ್ಟಿಯಲ್ಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಗಳ ಮಹಾಸಂಗಮ ಸಮಾವೇಶದಲ್ಲಿ ಹತ್ತು ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ, ವಿಜಯನಗರ ಇನ್ನಿತರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಟೇಕಾಫ್ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮಂಡ್ಯದಲ್ಲಿ ಯಶಸ್ವಿ ರೋಡ್ ಶೋ ನಡೆಸಿರುವ ಮೋದಿ, ದಾವಣಗೆರೆಯ ಸಮಾವೇಶ ಸ್ಥಳದ ಪೆಂಡಾಲ್ ಒಳಗೆ ತೆರೆದ ವಾಹನದಲ್ಲಿ ಜನರ ಮಧ್ಯದಿಂದ ವೇದಿಕೆಗೆ ಬರುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಗುಜರಾತ್ನಲ್ಲಿ ನಡೆದಿದ್ದ ಈ ಪ್ರಯೋಗವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಡಲು ಬಿಜೆಪಿ ಹೊರಟಿದೆ. 3 ವೇದಿಕೆ ನಿರ್ವಣ: ದಾವಣಗೆರೆಯ ಜಿಎಂಐಟಿ ಪಕ್ಕದ 400 ಎಕರೆ ಜಾಗದಲ್ಲಿ ಸಮಾವೇಶ ಆಯೋಜನೆಯಾಗಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಒಟ್ಟು 3 ವೇದಿಕೆಗಳನ್ನು ನಿರ್ವಿುಸಲಾಗುತ್ತಿದೆ. ಸಮಾವೇಶ ನಡೆಯುವ ಸ್ಥಳ ವೀಕ್ಷಣೆಗೆ ಒಂದು ದಿನ ಮುಂಚಿತವಾಗಿ (ಶುಕ್ರವಾರ) 10 ಸಾವಿರಕ್ಕೂ ಹೆಚ್ಚು ಜನರ ದಂಡೇ ಹರಿದು ಬಂದಿತ್ತು