ಪ್ರಲ್ಹಾದ ಜೋಷಿ, ಶೋಭಾಗೆ ಚುನಾವಣಾ ಜವಾಬ್ದಾರಿ

ಪ್ರಲ್ಹಾದ ಜೋಷಿ, ಶೋಭಾಗೆ ಚುನಾವಣಾ ಜವಾಬ್ದಾರಿ

ನವದೆಹಲಿ: ಉತ್ತರಾಖಂಡ ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಚುನಾವಣೆಗೆ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಷಿ ಅವರನ್ನು ಉಸ್ತುವಾರಿ ಮತ್ತು ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಉತ್ತರಾಖಂಡ ಬ್ರಾಹ್ಮಣ ಮತದಾರರು ನಿರ್ಣಾಯಕವಾಗಿರುವ ರಾಜ್ಯವಾಗಿದ್ದು, ಅಲ್ಲಿಗೆ ಪ್ರಲ್ಹಾದ ಜೋಷಿ ಅವರನ್ನು ನಿಯೋಜಿಸಲಾಗಿದೆ. ಬ್ರಾಹ್ಮಣ ಮತಗಳು ಚದುರಿ ಹೋಗದಂತೆ ಕಾಯ್ದುಕೊಳ್ಳುವುದರ ಜತೆಗೆ ಗೆಲುವು ಸಾಧಿಸಲು ಅಗತ್ಯ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಜೋಷಿಯವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಇತ್ತೀಚೆಗೆಷ್ಟೇ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದ ಶೋಭಾ ಅವರಿಗೆ ಅತ್ಯಂತ ದೊಡ್ಡ ರಾಜ್ಯ ಉತ್ತರಪ್ರದೇಶದ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಉಸ್ತುವಾರಿಯಾಗಿದ್ದಾರೆ.

ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದು, ಇಲ್ಲಿ ಅಧಿಕಾರ ವನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಪಕ್ಷದಲ್ಲಿ ಎರಡು ಮತ್ತು ಮೂರನೇ ಹಂತದ ನಾಯಕರನ್ನು ಚುನಾವಣಾ ರಾಜಕಾರಣದಲ್ಲಿ ಪಳಗಿಸಲು ಹೆಚ್ಚು ಹೆಚ್ಚು ನಾಯಕರನ್ನು ಚುನಾವಣೆಗಳಲ್ಲಿ ಬಳಸಿಕೊಳ್ಳಲು ಮುಂದಾಗಿದೆ.