ಪಿಎಸ್‌ಐ ನೇಮಕಾತಿ ಅಕ್ರಮ: ಎಡಿಜಿಪಿ, ಡಿವೈಎಸ್ಪಿ ಮನೆಗಳ ಮೇಲೆ ಇ.ಡಿ ದಾಳಿ

ಪಿಎಸ್‌ಐ ನೇಮಕಾತಿ ಅಕ್ರಮ: ಎಡಿಜಿಪಿ, ಡಿವೈಎಸ್ಪಿ ಮನೆಗಳ ಮೇಲೆ ಇ.ಡಿ ದಾಳಿ

ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಗಳಾದ ಅಮ್ರಿತ್ ಪೌಲ್ ಹಾಗೂ ಶಾಂತಕುಮಾರ್ ಮನೆ ಸೇರಿದಂತೆ 11 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ಮಾಡಿ, ಶೋಧ ನಡೆಸಿದರು.

'ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮ್ರಿತ್ ಪೌಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್, ವಿಭಾಗದ ಸಿಬ್ಬಂದಿ ಮೂಲಕ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು.

ಅಭ್ಯರ್ಥಿಗಳ ಒಎಂಆರ್ ಪ್ರತಿ ತಿದ್ದಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಬರುವಂತೆ ನೋಡಿಕೊಂಡಿದ್ದರು' ಎಂಬುದು ಸಿಐಡಿ ಅಧಿಕಾರಿಗಳ ತನಿಖೆಯಿಂದ ಪತ್ತೆಯಾಗಿತ್ತು.

ವಿಭಾಗದ ಸಿಬ್ಬಂದಿ ಮನೆ ಮೇಲೆ ದಾಳಿ ಮಾಡಿದ್ದ ಸಿಐಡಿ ಅಧಿಕಾರಿಗಳು, ₹ 2.50 ಕೋಟಿ ಜಪ್ತಿ ಮಾಡಿದ್ದರು. ಆರೋಪಿಗಳ ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದಿದ್ದ ಇ.ಡಿ ಅಧಿಕಾರಿಗಳು, ಇಬ್ಬರ ಮನೆಗಳ ಮೇಲೆ ಏಕಕಾಲದಲ್ಲಿ ಮಾಡಿದರು. ಇತರೆ ಆರೋಪಿಗಳ 9 ಸ್ಥಳಗಳಲ್ಲೂ ಶೋಧ ನಡೆಸಿದರು.

ಸಹಕಾರನಗರದಲ್ಲಿರುವ ಅಮ್ರಿತ್ ಪೌಲ್ ಮನೆ ಹಾಗೂ ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿರುವ ಶಾಂತಕುಮಾರ್ ಮನೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ರಾತ್ರಿಯವರೆಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಕುಟುಂಬದವರ ವಿಚಾರಣೆ: 'ಅಮ್ರಿತ್ ಪೌಲ್ ಹಾಗೂ ಶಾಂತಕುಮಾರ್, ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಮನೆಗಳಲ್ಲಿ ಶೋಧ ನಡೆಸಿದ ಇ.ಡಿ ಐವರು ಅಧಿಕಾರಿಗಳ ತಂಡ, ಕುಟುಂಬಸ್ಥರನ್ನು ವಿಚಾರಣೆ ನಡೆಸಿತು. ಹಣ ವರ್ಗಾವಣೆಗೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ಸಹ ನಡೆಸಿತು' ಎಂದು ಮೂಲಗಳು ಹೇಳಿವೆ.