ಈಶಾನ್ಯ ಭಾರತದವರಾಗಿ ಪದಕ ಗೆದ್ದರೆ ಮಾತ್ರ ಭಾರತೀಯರಾಗುತ್ತೀರಿ, ಇಲ್ಲವಾದರೆ ನಿಮ್ಮ ಹೆಸರೇ ಬೇರೆ!
ಮುಂಬೈ: ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ ಅಂಕಿತ ಕೊನ್ವರ್ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೆಯೊಂದನ್ನು ಕೊಟ್ಟು ಸುದ್ದಿಯಾಗಿದ್ದಾರೆ. ಮೀರಾಬಾಯಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಅವರು ಮಾತನಾಡಿರುವ ಬಗೆ ಅನೇಕರ ಗಮನ ಸೆಳೆದಿದೆ.
ಈಶಾನ್ಯ ಭಾರತದ ಮಣಿಪುರದ ಯುವತಿ ಮೀರಾಬಾಯಿ ಚಾನು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಕೆಯನ್ನು ದೇಶದ ಜನತೆ ಭಾರತದ ಹೆಮ್ಮೆ ಎಂದು ಕರೆಯಲಾರಂಭಿಸಿದೆ. ಈ ಬಗ್ಗೆ ಅಂಕಿತಾ ಕೂಡ ಮಾತನಾಡಿದ್ದಾರೆ. 'ನೀವು ಈಶಾನ್ಯ ಭಾರತದವರಾಗಿದ್ದರೆ, ದೇಶಕ್ಕಾಗಿ ಪದಕ ಗೆದ್ದಾಗ ಮಾತ್ರ ನೀವು ಭಾರತೀಯರಾಗಬಹುದು. ಇಲ್ಲದಿದ್ದರೆ ನಮ್ಮನ್ನು 'ಚಿಂಕಿ', 'ಚೈನೀಸ್', ಅಥವಾ ಹೊಸ ಸೇರ್ಪಡೆ 'ಕರೊನಾ' ಎಂದು ಕರೆಯಲಾಗುತ್ತದೆ' ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಭಾರತವು ಕೇವಲ ಜಾತಿಯತೆಯಿಂದ ಮಾತ್ರವಲ್ಲ ವರ್ಣಭೇದ ನೀತಿಯಿಂದಲೂ ಕೂಡಿದೆ. ನನ್ನ ಸ್ವಂತ ಅನುಭವದಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಅಸ್ಸಾಂ ಮೂಲದ ಆಕೆ ವರ್ಣಬೇಧ ನೀತಿಗೆ ತುತ್ತಾಗಿದ್ದಾಗಿ ಈ ಮೂಲಕ ಹೇಳಿಕೊಂಡಿದ್ದಾರೆ.
View this post on Instagram
ಅಂಕಿತಾ ಅವರ ಈ ಹೇಳಿಕೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಬೆಂಬಲವನ್ನೂ ನೀಡುತ್ತಿದ್ದಾರೆ.