`ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಹೇಳಿಕೆ : ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ
ಧಾರವಾಡ : ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಬಾಲಿಶ, ಅಕ್ಷಮ್ಯ ಅಪರಾಧದ ಹೇಳಿಕೆ, ಆರೋಪಿ ಶಾರಿಕ್ ಬ್ಲಾಸ್ಟ್ ಮಾಡಿದ್ದರೆ ನೂರಾರು ಜನರ ಸಾವು ಆಗುತ್ತಿತ್ತು.
ಭಯೋತ್ಪಾದನೆ ಇಡೀ ಜಗತ್ತಿಗೆ ಕಂಟಕವಾಗಿದೆ. ಭಯೋತ್ಪಾದನೆಗೆ ಪೂರಕವಾಗಿ ಮಾತನಾಡುವುದು ಅಂದ್ರೆ ಏನು? ಇಡೀ ಕಾಂಗ್ರೆಸ್ ಇಂತಹ ಮನಸ್ಥಿತಿಯಲ್ಲೇ ಬೆಳೆದು ಬಂದಿದೆ. ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳುವುದಷ್ಟೇ ಅಲ್ಲ. ಯಾವತ್ತೂ ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.
'ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯ್ತು? ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ. ಮತದಾನದ ಕಳವು ಇಡೀ ದೇಶದಲ್ಲಿ ಆಗಿರಲಿಲ್ಲ. ಈಗ ಇದನ್ನು ಮಾಡಿ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.