ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬದ್ಧ; ಸಿಎಂ ಬೊಮ್ಮಾಯಿ ಪುನರುಚ್ಚಾರ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬದ್ಧ; ಸಿಎಂ ಬೊಮ್ಮಾಯಿ ಪುನರುಚ್ಚಾರ

ಬೆಂಗಳೂರು: ಸಮಾನ ನಾಗರಿಕ ಸಂಹಿತೆ ವಿಚಾರ ಬಿಜೆಪಿಯ ಪ್ರಣಾಳಿಕೆಯಲ್ಲೇ ಇದ್ದು, ಇದರ ಜಾರಿಗೆ ಗಂಭೀರವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ನಮ್ಮ ಪಕ್ಷದ ರಾಷ್ಟ್ರೀಯ ಪ್ರಣಾಳಿಕೆಯಲ್ಲಿದೆ.

ಅಲ್ಲದೆ ಈಗಾಗಲೇ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾರಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿ ಎಲ್ಲರೂ ಸಮಾನತೆ ಮತ್ತು ಭಾÅತೃತ್ವದಿಂದ ಇರಬೇಕು ಎಂದು ಸಂವಿಧಾನವೇ ಹೇಳಿದೆ. ಹಾಗೆಯೇ ದೀನದಯಾಳ್‌ ಉಪಾಧ್ಯಾಯ ಅವರ ಕಾಲದಿಂದಲೇ ಈ ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಪ್ರಗತಿಯಲ್ಲಿದೆ. ದೇಶ ಮತ್ತು ರಾಜ್ಯದ ಮಟ್ಟದಲ್ಲಿ ಇದರ ಜಾರಿಗಾಗಿ ಗಂಭೀರವಾದ ಚಿಂತನೆ ನಡೆಯುತ್ತಿದೆ. ಸರಿಯಾದ ಸಮಯದಲ್ಲಿ ಇದನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಶುಕ್ರವಾರವಷ್ಟೇ ಶಿವಮೊಗ್ಗದಲ್ಲಿ ಮಾತನಾಡಿದ್ದ ಸಿಎಂ ಹೇಳಿದ್ದರು.

ಶನಿವಾರ ಗುಜರಾತ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಚುನಾವಣ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾವಿಸಲಾಗಿದೆ. ಈಗಾಗಲೇ ಚುನಾವಣೆ ಮುಗಿದ ಹಿಮಾಚಲ ಪ್ರದೇಶದಲ್ಲೂ ಇದೇ ರೀತಿಯ ಭರವಸೆ ನೀಡಲಾಗಿದೆ. ಅಲ್ಲದೆ ಒಂದೊಂದೇ ಬಿಜೆಪಿ ರಾಜ್ಯಗಳು ಈ ಬಗ್ಗೆ ಚಿಂತನೆ ನಡೆಸುತ್ತಿವೆ. ಈಗ ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆಯ ವಿಚಾರ ಮುನ್ನೆಲೆಗೆ ಬಂದಿದೆ.