ಸ್ಮಶಾನ ಭೂಮಿ ಮಂಜೂರು ಮಾಡಲು ಆಗ್ರಹ

ಮಸ್ಕಿ: ತಾಲ್ಲೂಕಿನ ಹೂವಿನಭಾವಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಕೆಆರ್‌ಎಸ್ ತಾಲೂಕು ಘಟಕದ ಅಧ್ಯಕ್ಷ ಸಂತೋಷ ಹಿರೇದಿನ್ನಿ ಅವರು, 'ರಾಜ್ಯ ಸರ್ಕಾರ ಪ್ರತಿಯೊಂದು ಗ್ರಾಮದಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಲು ಆದೇಶ ನೀಡಿದೆ. ಆದರೆ ಹೂವಿಭಾವಿ ಗ್ರಾಮದ ಸರ್ವೆ ನಂ.62ರಲ್ಲಿ 62.24 ಎಕರೆ ಜಮೀನು ಪಂಪಣ್ಣ ತಂದೆ ಆದಪ್ಪ ಇವರ ಹೆಸರಿನಲ್ಲಿದೆ. ಈ ಜಮೀನಿನ ಪಕ್ಕದ ಸರ್ವೆ.ನಂ.1 ರ ಸರ್ಕಾರಿ ಜಮೀನು ಇದ್ದು, ಈ ಜಮೀನಿನಲ್ಲಿ ಮುಸ್ಲಿಂ ಸಮಾಜದವರು ಸುಮಾರು ಮೂರು ತಲೆಮಾರುಗಳಿಂದ ಅಂತ್ಯಸಂಸ್ಕಾರ ಪ್ರಕ್ರಿಯೆ ಮಾಡುತ್ತಾ ಬಂದಿದ್ದಾರೆ. ಆದರೆ ಇದೀಗ ಪಂಪಣ್ಣ ಎನ್ನುವವರು ಸರ್ಕಾರಿ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಜಾಗದಲ್ಲಿ ಮುಸ್ಲಿಂ ಸಮುದಾಯಕ್ಕೆ ಅಂತ್ಯ ಸಂಸ್ಕಾರ ಮಾಡಲು ಬಿಡದೇ ಈ ಜಮೀನು ನನ್ನದು ಎಂದು ಇದರಲ್ಲಿ ಶವವನ್ನು ಹೂಳಲು ಬೀಡುವುದಿಲ್ಲ ಎಂದು ಗುಂಡಾಗಿರಿ ಮಾಡುತ್ತಿದ್ದಾರೆ ಎಂದು ದೂರಿದರು.
ಮುಸ್ಲಿಂ ಸಮುದಾಯದಲ್ಲಿ ಯಾರಾದರೂ ಮೃತ ಪಟ್ಟರೆ ಶವವನ್ನು ಹೊತ್ತು ತಿರುಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ತಾಲೂಕು ಆಡಳಿತ ಸರ್ವೆ.ನಂ 1 ರ ಸರ್ಕಾರಿ ಜಮೀನನ್ನು ಮುಸ್ಲಿಂ ಸಮುದಾಯದ ಸ್ಮಶಾನ ಮಂಜೂರು ಮಾಡಿ ಶವ ಹೂಳಲು ಅನೂಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ ಅಖ್ತರ್ ಮನವಿ ಸ್ವೀಕರಿಸಿದರು.
ಕೆಆರ್‌ಎಸ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪೂರು, ಅಮರೇಶ ಪಾಮನಕಲ್ಲೂರು, ತಿರುಪತಿ, ಬುಡ್ನೇಸಾಬ, ಹುಸೇನಸಾಬ್, ಕೆಆರ್‌ಎಸ್‌ನ ಚಿಟ್ಟಿ ಬಾಬು ಸೇರಿದಂತೆ ಇನ್ನಿತರರು ಇದ್ದರು.