ಕಿಲಾಡಿ ಕಳ್ಳನಿಗೆ ಕ್ಯಾಮೆರಾಗಳ ಮೇಲೇ ಕಣ್ಣು! ಸಿಕ್ಕಿಬಿದ್ದಿದ್ದು ಹೇಗೆ

ಬೆಂಗಳೂರು: ಕಳ್ಳರ ಇತಿಹಾಸ ತಿಳಿದು, ಅನುಭವಿಸಿರುವ ಪೊಲೀಸರು ಹೇಳುವ ಪ್ರಕಾರ… ಬಹುತೇಕ ಕಳ್ಳರು ಒಂದೇ ತೆರನಾದ ಕಳ್ಳತನಕ್ಕಿಳಿಯುವ ಅಭ್ಯಾಸದಲ್ಲಿರುತ್ತಾರಂತೆ! ಅದೇ ಥರ ಇಲ್ಲೊಬ್ಬ ಕಳ್ಳ ಕೂಡ ಕೇವಲ ಕ್ಯಾಮೆರಾಗಳನ್ನು ಮಾತ್ರ ಎಗರಿಸುತ್ತಿದ್ದ.
ಆರೋಪಿ ಪ್ರಜ್ವಲ್ ಫ್ಲಿಪ್ ಕಾರ್ಟ್ ಮತ್ತು ಮದುವೆ ಮನೆಯಲ್ಲೂ ಕೈಚಳಕ ತೋರಿಸುತ್ತಿದ್ದ. ಅಕ್ಟೋಬರ್ 25ರಂದು ಫ್ಲಿಪ್ ಕಾರ್ಟ್ನಲ್ಲಿ ಕ್ಯಾಮೆರಾ ಬುಕ್ ಮಾಡಿದ್ದ. ಯಶವಂತಪುರ ಗಾಯತ್ರಿ ಟೆಂಪಲ್ ಬಳಿ ಡೆಲಿವರಿ ಪಡೆದು, ಹಣ ನೀಡದೆ ಎಸ್ಕೇಪ್ ಆಗಿದ್ದ.
ಅದೇ ರೀತಿ ಯಶವಂತಪುರದ ಕಲ್ಯಾಣ ಮಂಟಪದಲ್ಲಿ ಆರೋಪಿ ಪ್ರಜ್ವಲ್ ಕ್ಯಾಮೆರಾ ಕಳ್ಳತನ ಮಾಡಿದ್ದ. ಮೊದಲಿಗೆ ಮದುಮಗನ ಕಡೆಯವನು ಎಂದು ಹೇಳಿ ಕ್ಯಾಮೆರಾಮ್ಯಾನ್ನನ್ನು ಪರಿಚಯ ಮಾಡಿಕೊಂಡ. ಟಿಪ್ಟಾಪ್ ಆಗಿದ್ದ ಇವನನ್ನು ಕ್ಯಾಮೆರಾಮ್ಯಾನ್ ನಂಬಿಬಿಟ್ಟ. ನಂತರ ಫೋಟೊ ಕ್ಲಾರಿಟಿ ಚೆಕ್ ಮಾಡುವಂತೆ ಆರೋಪಿ ಪ್ರಜ್ವಲ್ ನಟಿಸಿದ್ದಾನೆ; ಕೆಲವು ನಿಮಿಷಗಳಲ್ಲೇ ಕ್ಯಾಮೆರಾ ಸಮೇತ ಪರಾರಿಯಾಗಿದ್ದಾನೆ.
ಇದೇ ರೀತಿ ಇನ್ನೂ ಕೆಲವೆಡೆ ಕ್ಯಾಮೆರಾ ಕದ್ದ ಕೇಸಲ್ಲಿ ಪ್ರಜ್ವಲ್ ಭಾಗಿಯಾಗಿದ್ದ. ಕಡೆಗೆ ಒಂದು ಪ್ರಕರಣದಲ್ಲಿ ಪೊಲೀಸರಿಗೆ ತಗುಲಿಕೊಂಡ. ಸದ್ಯಕ್ಕೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ.