LPG ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ; ಇಂದಿನಿಂದಲೇ ಹೊಸ ಬೆಲೆ ಜಾರಿ
ನವದೆಹಲಿ, ಅಕ್ಟೋಬರ್ 6: ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಬುಧವಾರ ಏರಿಕೆ ಮಾಡಲಾಗಿದೆ. ಸಿಲಿಂಡರ್‌ಗೆ 15 ರೂ ಬೆಲೆ ಏರಿಕೆ ಮಾಡಲಾಗಿದ್ದು, ಈ ಮೂಲಕ ಎರಡು ತಿಂಗಳಿನಲ್ಲಿ ಸತತ ನಾಲ್ಕನೇ ಬಾರಿ ದರ ಹೆಚ್ಚಳ ಮಾಡಿದಂತಾಗಿದೆ.
ಬುಧವಾರ ಅಕ್ಟೋಬರ್ 6ರಂದು ಸಬ್ಸಿಡಿ ಇಲ್ಲದ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 15 ರೂ ಏರಿಕೆ ಮಾಡಿರುವುದಾಗಿ ಸರ್ಕಾರಿ ತೈಲ ಕಂಪನಿಗಳು ಮಾಹಿತಿ ನೀಡಿವೆ. ಈ ಬೆಲೆ ಏರಿಕೆಯೊಂದಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50ರೂ ಇಂದ 899.50 ರೂಗೆ ಏರಿಕೆಯಾಗಿದೆ.
ಅಕ್ಟೋಬರ್ ಮೊದಲ ದಿನದಂದು ತೈಲ ಕಂಪನಿಗಳು 19 ಕೆ.ಜಿ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 43.5 ರೂ ಏರಿಕೆ ಮಾಡಿದ್ದರು. ಇದೀಗ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಇದರಿಂದ 5 ಕೆ.ಜಿ, ಸಿಲಿಂಡರ್ ಬೆಲೆ 502 ರೂ ಆಗಿದೆ. ಅಕ್ಟೋಬರ್ 6ರಿಂದಲೇ ಹೊಸ ಬೆಲೆ ಜಾರಿಗೆ ಬರಲಿದೆ. ಎರಡು ತಿಂಗಳಿನಲ್ಲಿ ನಾಲ್ಕನೇ ಬಾರಿ ಬೆಲೆ ಏರಿಕೆಯಾಗಿದೆ. ಸೆಪ್ಟೆಂಬರ್ 1ರಂದು ಕೊನೆಯದಾಗಿ ಸಬ್ಸಿಡಿ ಹಾಗೂ ಸಬ್ಸಿಡಿರಹಿತ ಸಿಲಿಂಡರ್ ಬೆಲೆಯನ್ನು 25ರೂ ಏರಿಕೆ ಮಾಡಲಾಗಿತ್ತು.
ಇಂದಿನ ಬೆಲೆ ಹೆಚ್ಚಳದೊಂದಿಗೆ ಜನವರಿ 1ರಿಂದ ಸಿಲಿಂಡರ್‌ಗೆ ಒಟ್ಟು 205ರೂ ಏರಿಕೆಯಾದಂತಾಗಿದೆ.
ದೇಶದಲ್ಲಿ ಇಂಧನ ದರವೂ ಏರಿಕೆ ಹಾದಿಯಲ್ಲಿದ್ದು, ಬುಧವಾರ, ಅಕ್ಟೋಬರ್ 6ರಂದು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 30 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹೆಚ್ಚಳವಾಗಿದೆ.
ಮಂಗಳವಾರ ಇಂಧನ ದರ 25-30 ಪೈಸೆಯಂತೆ ಏರಿಕೆಯಾಗಿತ್ತು. ಇಂದು ಮತ್ತೆ ಏರಿಕೆಯಾಗಿದೆ. ಜಾಗತಿಕವಾಗಿ ಕಚ್ಚಾತೈಲ ಬೆಲೆ 80 ಡಾಲರ್ ದಾಟಿ ಮುನ್ನುಗ್ಗುತ್ತಿದ್ದು, ಭಾರತದಲ್ಲಿ ಕಳೆದ 13 ದಿನಗಳಲ್ಲಿ 10 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ.
14.2 ಕೆ.ಜಿ. ಸಿಲಿಂಡರ್ ದರ:
ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ 1 ಮತ್ತು 15ನೇ ತಾರೀಕಿನ ಬಳಿಕ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಅದರಂತೆ ಅಕ್ಟೋಬರ್ 6ರಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ.
* ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆ.ಜಿ. ಸಿಲಿಂಡರ್ ಬೆಲೆ 899.50 ರೂ ಆಗಿದೆ.
* ಕೋಲ್ಕತ್ತಾದಲ್ಲಿ 911 ರೂ ಇಂದ 926 ರೂ ಆಗಿದೆ
* ಮುಂಬೈನಲ್ಲಿ 844.50 ರೂ ಇಂದ 899.50ರೂ ಗೆ ಏರಿಕೆ
* ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 915.50ರೂ ಆಗಿದೆ.
ಈ ವರ್ಷ ಸಿಲಿಂಡರ್‌ಗೆ 205 ರೂ ಬೆಲೆ ಏರಿಕೆ;
ಕಳೆದ ನವೆಂಬರ್ ತಿಂಗಳಿನಿಂದಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಭಾರತದಲ್ಲಿಯೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕಂಡಿತ್ತು. ಪೆಟ್ರೋಲ್, ಡೀಸೆಲ್ ದರ ಸೇರಿದಂತೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿಯೂ ಏರಿಕೆ ಮಾಡಲಾಗಿತ್ತು. ಒಟ್ಟಾರೆ ಜನವರಿ 1, 2021ರಿಂದ ಅಕ್ಟೋಬರ್ 6, 2021ರವರೆಗೆ 205 ರೂ ನಷ್ಟು ಬೆಲೆ ಏರಿಕೆಯಾದಂತಾಗಿದೆ.
ನಿಮ್ಮ ನಗರದಲ್ಲಿನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು https://iocl.com/Products/IndaneGas.aspx ಇಲ್ಲಿ ಪರಿಶೀಲಿಸಬಹುದು.
ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್‌ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿಸಿದೆ.