ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಿ
ಬೆಳಗಾವಿ: ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಸೈಕಲ್ ರ್‍ಯಾಲಿ ನಡೆಸಿದ ಸಾರಿಗೆ ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್, 'ಸಾರಿಗೆ ಸಂಸ್ಥೆಯ 4 ನಿಗಮಗಳಲ್ಲಿ 1.07 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ನಿತ್ಯ 1 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದಾರೆ. ಸರ್ಕಾರದ ತನ್ನ ಅಧೀನದಲ್ಲಿರುವ ವಿವಿಧ ನಿಗಮ, ಇಲಾಖೆಗಳ ನೌಕರರಿಗೆ ಕಾಲಕಾಲಕ್ಕೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುತ್ತಿದೆ. ಆದರೆ, ಸಾರಿಗೆ ಸಂಸ್ಥೆಯ ನೌಕರರ ವಿಚಾರ ಬಂದಾಗ ತಾರತಮ್ಯ ಅನುಸರಿಸುತ್ತಿದೆ. ಇದನ್ನು ಖಂಡಿಸಿ ಅ.10ರಿಂದ ಬಳ್ಳಾರಿಯಿಂದ ರಾಜ್ಯದಾದ್ಯಂತ ಸೈಕಲ್ ರ್‍ಯಾಲಿ ನಡೆಸುತ್ತಿದ್ದೇವೆ' ಎಂದು ತಿಳಿಸಿದರು.
'ಸಾರಿಗೆ ಮುಷ್ಕರದ ವೇಳೆ ಮಾಡಿರುವ ನೌಕರರ ವರ್ಗಾವಣೆ ಮತ್ತು ಅವರಿಗೆ ನೀಡಿರುವ ಇತರ ಶಿಕ್ಷೆಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೆ ರದ್ದುಗೊಳಿಸಬೇಕು. ನಾಲ್ಕು ವರ್ಷಗಳಿಗೊಮ್ಮೆ ಅವೈಜ್ಞಾನಿಕವಾಗಿ ವೇತನ ಪರಿಷ್ಕರಿಸುವುದನ್ನು ಕೈಬಿಡಬೇಕು. ಸರ್ಕಾರದ ವಿವಿಧ ಇಲಾಖೆಗಳು, ನಿಗಮ- ಮಂಡಳಿಗಳಲ್ಲಿ ಜಾರಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಇಲ್ಲಿಯೂ ಜಾರಿಗೊಳಿಸಬೇಕು' ಎಂದು ಒತ್ತಾಯಿಸಿದರು.
ಕೂಟದ ಬೆಳಗಾವಿ ವಿಭಾಗದ ಗೌರವಾಧ್ಯಕ್ಷ ಮಹೇಶ ಶೀಗಿಹಳ್ಳಿ, 'ಮುಷ್ಕರದ ವೇಳೆ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ ಪ್ರಕರಣ ಹಿಂದಕ್ಕೆ ಪಡೆಯಬೇಕು. 1992ರಿಂದ ಈವರೆಗೂ ಸಾರಿಗೆ ನಿಗಮಗಳಲ್ಲಿನ ಕಾರ್ಮಿಕ ಸಂಘಗಳಿಗೆ ಚುನಾವಣೆ ನಡೆದಿಲ್ಲ. ಹಾಗಾಗಿ ತ್ವರಿತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
ಸಂಜೀವ ಜಿಗೋಜಿ, ಪಿ.ಎಫ್.ಕೋಲಕಾರ್, ಮಲ್ಲಿಕಾರ್ಜುನ ಸಜ್ಜನ ಪ್ರತಿಭಟನೆ ನೇತೃತ್ವ ವಹಿಸಿದ್ದರು.