ಒಂದು ವರ್ಷದ ಹಿಂದೆ ಇದೇ ದಿನ ಸಮಂತಾ ಆಡಿದ್ದ ಮಾತು ಇಷ್ಟು ಬೇಗ ಸುಳ್ಳಾಗಿ ಹೋಯಿತಾ..?!

ಒಂದು ವರ್ಷದ ಹಿಂದೆ ಇದೇ ದಿನ ಸಮಂತಾ ಆಡಿದ್ದ ಮಾತು ಇಷ್ಟು ಬೇಗ ಸುಳ್ಳಾಗಿ ಹೋಯಿತಾ..?!

ಹೈದರಾಬಾದ್​: ಒಂದು ವೇಳೆ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್​ ಆಗದೇ ಒಟ್ಟಿಗೆ ಇದ್ದಿದ್ದರೆ, ಈ ದಿನ ಅವರ ಪಾಲಿಗೆ ಸುದಿನ ಆಗಿರುತ್ತಿತ್ತು. ಇಂದು ಅವರ ನಾಲ್ಕನೇ ವಿವಾಹ ವಾರ್ಷಿಕೋತ್ಸವ. ಅಕ್ಟೋಬರ್​ 6 2017ರಂದು ಹಿಂದು ಸಂಪ್ರದಾಯದಂತೆ ಮತ್ತು ಅ.7 2017ರಂದು ಕ್ರಿಶ್ಚಿಯನ್​ ಸಂಪ್ರದಾಯದಂತೆ ನಾಗಸಮಂತಾ ಮದುವೆ ಆಗಿದ್ದರು. ಇಬ್ಬರ ಮದುವೆ ಸಮಾರಂಭ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಅದ್ಧೂರಿಯಾಗಿ ನಡೆದು ಹೊಸ ಬಾಳ ಪಯಣಕ್ಕೆ ಕಾಲಿಟ್ಟಿದ್ದರು.

ತಾರಾದಂಪತಿಯ ವೈವಾಹಿಕ ಜೀವನ ಖುಷಿಯಾಗಿ ಸಾಗುತ್ತಿರುವಾಗಲೇ ಇಬ್ಬರ ನಡುವೆ ಏನಾಯಿತೋ ಅಕ್ಟೋಬರ್​ 2ರಂದು ವೆಡ್ಡಿಂಗ್​ ಆಯನಿವರ್ಸರಿಗೆ ಇನ್ನು 4 ದಿನಗಳು ಇರುವಾಗಲೇ ತಮ್ಮ ದಾಂಪತ್ಯ ಜೀವನಕ್ಕೆ ಬ್ರೇಕ್​ ಹಾಕುವ ಮೂಲಕ ಕುಟುಬಸ್ಥರನ್ನು ಸೇರಿದಂತೆ ಅಭಿಮಾನಿಗಳನ್ನು ತಾರಾದಂಪತಿ ಶಾಕ್​ಗೆ ದೂಡಿದ್ದಾರೆ. ಇಬ್ಬರು ಬೇರೆ ಬೇರೆ ಆಗಿರುವುದನ್ನು ಅಭಿಮಾನಿಗಳಿಗೆ ಈ ಕ್ಷಣದಲ್ಲಿ ಅಗರಿಸಿಕೊಳ್ಳು ಆಗುತ್ತಿಲ್ಲ.

ಏನೇ ಇರಲಿ ಸದ್ಯ ಇಬ್ಬರು ಬೇರೆ ಬೇರೆ ಆಗಿದ್ದಾರೆ. ಮತ್ತೆ ಒಂದಾಗುವ ನಿರೀಕ್ಷೆಯಲ್ಲೇ ಅಭಿಮಾನಿಗಳಿದ್ದಾರೆ. ಅದಕ್ಕೆ ಕಾಲ ಕೂಡಿ ಬರುತ್ತೋ? ಇಲ್ಲವೋ? ಕಾದು ನೋಡಬೇಕಿದೆ. ಎಲ್ಲವೂ ಸರಿಯಾಗಿದ್ದರೆ ಇಂದು ಸಮಂತಾ ಮತ್ತು ನಾಗಚೈತನ್ಯ ಪರಸ್ಪರ ಶುಭಾಶುಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಒಂದು ವರ್ಷದ ಹಿಂದೆಯೂ ಸಮಂತಾ ಪತಿ ನಾಗಚೈತನ್ಯಗೆ ಶುಭಕೋರಿದ್ದರು. ಈ ವೇಳೆ ಅವರಾಡಿದ್ದ ಮಾತು ಇಷ್ಟು ಬೇಗ ಸುಳ್ಳಾಯಿತಾ ಎಂಬ ಚರ್ಚೆ ಜಾಲತಾಣದಲ್ಲಿ ನಡೆಯುತ್ತಿದೆ.

ಕಳೆದ ವರ್ಷ ಅಕ್ಟೋಬರ್​ 6ರಂದು ನಾಗಚೈತನ್ಯಗೆ ಶುಭಕೋರಿದ್ದ ಸಮಂತಾ, ನೀನು ನನ್ನವನು, ನಾನು ನಿನ್ನವಳು, ನಾವು ಯಾವುದೇ ಬಾಗಿಲಿಗೆ ಬಂದರೂ ಒಟ್ಟಿಗೆ ತೆರಯೋಣ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪತಿದೇವ ಎಂದು ಲವ್​ ಸಿಂಬಲ್​ ಹಾಕಿ ಸಮಂತಾ ಜಾಲತಾಣದಲ್ಲಿ ಸಂದೇಶ ಕಳುಹಿಸಿದ್ದರು. ಆದರೆ, ಈಗ ದಾಂಪತ್ಯ ಜೀವನದ ಬಾಗಿಲನ್ನು ಒಟ್ಟಿಗೆ ಮುಚ್ಚಿದ್ದಾರೆ.

ಈ ಹಿಂದೆ ಜನಪ್ರಿಯ ನಿಯತಕಾಲಿಕೆ ಒಂದಕ್ಕೆ ಸಮಂತಾ ಸಂದರ್ಶನ ನೀಡಿದ್ದರು. ಈ ವೇಳೆ ಕುಟುಂಬದ ಬಗ್ಗೆ ಮಾತನಾಡಿದ್ದ ಸಮಂತಾ, ನಾನು ಕುಟುಂಬವನ್ನು ಹೊಂದಲು ಮತ್ತು ಹೆಚ್ಚು ಕುಟುಂಬದ ಬಗ್ಗೆ ಆಸಕ್ತಿ ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು. ಆದರೆ, ಅವರಾಡಿದ ಮಾತುಗಳೆಲ್ಲವೂ ಇದೀಗ ಸುಳ್ಳಾಗಿ ಹೋಗಿದ್ದು, ಇಬ್ಬರು ಮತ್ತೆ ಒಂದಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಅ.2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡುವ ಮೂಲಕ ಡಿವೋರ್ಸ್​ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 'ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ' ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್​ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ.