ಎಮ್ಮೆ ಹಾಲು ಕೊಡುತ್ತಿಲ್ಲವೆಂದು ಠಾಣೆ ಮೆಟ್ಟಿಲೇರಿದ ಭೂಪ.!
ಎಮ್ಮೆಯು ದಿನಪೂರ್ತಿ ಬೂಸಾ ತಿಂದರೂ ಕೂಡ ಹಾಲು ಕೊಡಲು ಮಾತ್ರ ಹಿಂಜರಿಯುತ್ತದೆ. ಎಷ್ಟೇ ಪೂಸಿ ಹೊಡೆದರೂ, ಗದರಿಸಿದರೂ ಕೂಡ ಒಂದು ತೊಟ್ಟು ಹಾಲು ಕೊಡುತ್ತಿಲ್ಲ, ಬದಲಿಗೆ ನಮ್ಮನ್ನೇ ತಿವಿಯಲು ಬರುತ್ತದೆ ಎಂದು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ರೈತರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
45 ವರ್ಷದ ರೈತ ಬಾಬುಲಾಲ್ ಜಾತವ್ ಅವರು ಎಮ್ಮೆಯ ವಿರುದ್ಧ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾರೆ ! ಹೌದು, ಇದು ಸತ್ಯ.
ನಯಾಗಾಂವ್ ಎಂಬ ಗ್ರಾಮದಲ್ಲಿ ಈ ವಿಚಿತ್ರ ಘಟನೆ ವರದಿಯಾಗಿದೆ. ಕಳೆದ ತಿಂಗಳು ಚೆನ್ನಾಗಿಯೇ ಹಾಲು ಕೊಡುತ್ತಿದ್ದ ಎಮ್ಮೆಯು ಏಕಾಏಕಿ ಕೆಲ ದಿನಗಳಿಂದ ಹಾಲು ಕೊಡುತ್ತಿಲ್ಲ. ಸುತ್ತಲಿನ ಗ್ರಾಮಸ್ಥರು, ಸ್ನೇಹಿತರನ್ನೆಲ್ಲ ವಿಚಾರಿಸಿದಾಗ, ಎಮ್ಮೆಯ ಮೇಲೆ ಮಾಟ ಮಾಡಲಾಗಿದೆ ಎಂದು ಗೊತ್ತಾಯಿತು. ನೀವೇ ಸಹಾಯ ಮಾಡಿ ಎಂದು ಬಾಬುಲಾಲ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಶಾ ಅವರ ತನಕ ತನ್ನ ದೂರು ಒಯ್ದು, ಇಲಾಖೆಗೆ ತಲೆನೋವು ತಂದಿಟ್ಟಿದ್ದಾನೆ.
ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬಾಬುಲಾಲ್ ತನ್ನ ಎಮ್ಮೆಯನ್ನು ಸೀದಾ ಪೊಲೀಸ್ ಠಾಣೆಗೆ ಒಯ್ದು ನಿಂತಿರುವ ಫೋಟೊ ಹಾಗೂ ವಿಡಿಯೊ ವೈರಲ್ ಆಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಪೊಲೀಸ್ ಅಧಿಕಾರಿ ಶಾ ಅವರು, ಗ್ರಾಮದ ಪೊಲೀಸ್ ಠಾಣೆ ಮುಖ್ಯಸ್ಥರಿಗೆ ಕರೆ ಮಾಡಿ ಕೂಡಲೇ ಪಶುವೈದ್ಯರನ್ನು ಬಾಬುಲಾಲ್ ಮನೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಅದರಂತೆ ಎಮ್ಮೆಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಮಾರನೇಯ ದಿನ ಬೆಳಗ್ಗೆಯೇ ಎಮ್ಮೆಯು ಎಂದಿನಂತೆ ಹಾಲು ಕೊಟ್ಟಾಗ ಬಾಬುಲಾಲ್ ಮುಖದಲ್ಲಿ ಮಂದಹಾಸ ಮೂಡಿದೆ.