ಬಸವಣ್ಣ- ಅಂಬೇಡ್ಕರ್ ಸಿದ್ಧಾಂತಗಳಿಗೆ ಸರ್ಕಾರ ಅಪಚಾರ : ಡಿಕೆಶಿ

ಬೆಳಗಾವಿ, ಡಿ.22- ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸುವ ಮೂಲಕ ರಾಜ್ಯ ಸರ್ಕಾರ ಬಸವಣ್ಣ ಮತ್ತುಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಅಪಚಾರ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೆ ಶತಮಾನದಲ್ಲಿ ಎಲ್ಲ ಸಮುದಾಯಗಳಿಗೂ ಲಿಂಗಧಾರಣೆ ಮಾಡುವ ಮೂಲಕ ಬಸವಣ್ಣ ಸಮಾನತೆಯ ತತ್ವ ಸಾರಿದ್ದರು. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಬಗ್ಗೆ ಪ್ರಚಾರ ಮಾಡಿದ್ದರು. ಆದರೆ, ಬಿಜೆಪಿಯವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕ್ರೈಸ್ತರು, ಮುಸಲ್ಮಾನರನ್ನು ಬೆದರಿಸುವ ಉದ್ದೇಶದಿಂದ ಈ ಕಾಯ್ದೆ ಮಂಡಿಸಲಾಗಿದೆ.
ಇದರಿಂದ ಹಲವು ಮಠಾೀಧಿಶರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ನಾವು ಕೂಡ ಲಿಂಗಧಾರಣೆ ಮಾಡಿ ಧರ್ಮ ಪ್ರಚಾರ ಮಾಡುತ್ತೇವೆ. ಈ ಕಾನೂನು ಮುಂದಿಟ್ಟುಕೊಂಡು ನಾಳೆ ನಮ್ಮನ್ನೂ ಎದುರಿಸಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕ್ರೈಸ್ತ, ಮುಸಲ್ಮಾನ್ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಬಿಜೆಪಿಯವರು ಕೇಂದ್ರ ಸಚಿವರು, ರಾಜ್ಯ ಸಚಿವರುಗಳಿಂದ ಶಿಫಾರಸು ಪತ್ರಗಳನ್ನು ಹಿಡಿದು ನಿಲ್ಲುತ್ತಾರೆ. ಎಲ್ಲರಿಗೂ ಸೆಂಟ್‍ಜಾನ್, ಕ್ರೈಸ್ಟ್ ಯೂನಿವರ್ಸಿಟಿ, ಬಾಲ್ಡ್ವಿನ್ ಶಿಕ್ಷಣ ಸಂಸ್ಥೆಗಳೇ ಬೇಕು. ಅಲ್ಲಿ ಸೀಟು ಕೊಡದೆ ಇದ್ದಾಗ ಹೆದರಿಸಲು ಈ ಕಾನೂನು ತಂದಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ದಲಿತರು ಬೌದ್ಧಧರ್ಮ ಪ್ರಚಾರ ಮಾಡುತ್ತಾರೆ. ರಾಜ್ಯ ಸರ್ಕಾರ ವಿಧ್ವಂಸಕಾರಿ ಕಾನೂನು ಜಾರಿಗೆ ತರುವ ಮೂಲಕ ಸಾಮರಸ್ಯ ಹಾಳು ಮಾಡಲು ಹೊರಟಿದೆ. ಧರ್ಮಸ್ಥಳದ ಧರ್ಮಾಕಾರಿ ವೀರೇಂದ್ರ ಹೆಗ್ಗಡೆ ಅವರು ಜೈನಧರ್ಮದವರು. ನಮ್ಮಲ್ಲಿ ಧರ್ಮ ಸಾಮರಸ್ಯ ಉತ್ತಮವಾಗಿದೆ. ಅನಗತ್ಯವಾಗಿ ರಾಜ್ಯ ಸರ್ಕಾರ ಕಾನೂನು ಜಾರಿಗೆ ತಂದಿದೆ ಎಂದು ಕಿಡಿಕಾರಿದರು.
ಪೋರ್ಚುಗೀಸರು, ಬ್ರಿಟಿಷರು ಸೇರಿ ಸುಮಾರು 600 ವರ್ಷ ಭಾರತವನ್ನು ಆಳಿದ್ದಾರೆ. ಆದರೂ ಕ್ರಿಶ್ಚಿಯನ್ನರ ಸಂಖ್ಯೆ ಶೇ.2ರಷ್ಟನ್ನು ದಾಟಿಲ್ಲ. ಮೊಘಲರು, ಮುಸ್ಲಿಂ ದೊರೆಗಳು 700 ವರ್ಷಕ್ಕೂ ಮೀರಿ ಆಳ್ವಿಕೆ ನಡೆಸಿದ್ದಾರೆ. ಮುಸ್ಲಿಮರ ಸಂಖ್ಯೆ ಶೇ.11 ಅಥವಾ 12ರಷ್ಟನ್ನೂ ದಾಟಿಲ್ಲ. ಬಿಜೆಪಿ ನಿರಂತರವಾಗಿ ಚುನಾವಣೆಯಲ್ಲಿ ಸೋಲು ಕಾಣುತ್ತಿರುವುದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆತುರಾತುರವಾಗಿ ಮತಾಂತರ ನಿಷೇಧ ಕಾಯ್ದೆ ಮಂಡಿಸಿದೆ ಎಂದು ಆರೋಪಿಸಿದರು.
ಕಂದಾಯ ಸಚಿವ ಆರ್.ಅಶೋಕ್ ನೆರೆ ಹಾವಳಿ ಬಗ್ಗೆ ನಡೆದ ಚರ್ಚೆಗೆ ನಿನ್ನೆ ಉತ್ತರ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಅದನ್ನು ಅರ್ಧಕ್ಕೇ ನಿಲ್ಲಿಸಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಾಂತರ ನಿಷೇಧ ಕಾಯ್ದೆಗೆ ಅವಕಾಶ ಮಾಡಿಕೊಟ್ಟರು. ಅವರು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿರುವುದು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು. ಆದರೆ, ಬಿಜೆಪಿ ನಾಯಕರಂತೆ ನಡೆದುಕೊಳ್ಳುತ್ತಿದ್ದಾರೆ.
ಅಗತ್ಯವಿದ್ದರೆ ಅವರು ತಮ್ಮ ಬಾವುಟವನ್ನು ಹಾಕಿಕೊಂಡು ಬೇರೆಡೆ ಕುಳಿತುಕೊಳ್ಳಲಿ. ಸಭಾಧ್ಯಕ್ಷ ಸ್ಥಾನದಲ್ಲಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಮತಾಂತರ ನಿಷೇಧ ಕಾಯ್ದೆಯನ್ನು ನಾನು ನಿನ್ನೆ ಹರಿದು ಹಾಕಿದ್ದೇನೆ. ಅವರು ತೆಗೆದುಕೊಂಡ ನಿರ್ಧಾರ ನನಗೆ ಇಷ್ಟವಾಗಿಲ್ಲ ಎಂದು ಹೇಳಿದರು.
ಸರ್ಕಾರ ಬಸವಣ್ಣನವರ ತತ್ವಗಳಿಗೆ ದ್ರೋಹ ಮಾಡುತ್ತಿದೆ. ಪ್ರೀತಿಸಿ ಮದುವೆಯಾದವರನ್ನು ಧರ್ಮದ ಕಾರಣಕ್ಕಾಗಿ ಬೇರ್ಪಡಿಸಲು ಸಾಧ್ಯವೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಕಾಂಗ್ರೆಸ್‍ನವರು ಶೇ.40ರಷ್ಟು ಕಮಿಷನ್‍ನ ಭ್ರಷ್ಟಾಚಾರ, ಬಿಟ್ ಕಾಯಿನ್ ಹಗರಣ, ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರ ನೀಡದಿರುವುದು, ರೈತರಿಗೆ ನೆರವು ನೀಡದೆ ಇರುವ ವಿಷಯಗಳನ್ನು ಚರ್ಚಿಸಲು ತಯಾರಿ ನಡೆಸಿಕೊಂಡಿದ್ದರು. ಅದನ್ನು ತಪ್ಪಿಸಲು ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಲಾಗಿದೆ ಎಂದು ಆರೋಪಿಸಿದರು.