ಮುಲಾಜಿಲ್ಲದೆ ಒತ್ತುವರಿ ಜಾಗ ತೆರವು : ಸಚಿವ ಆರ್.ಅಶೋಕ್

ಬೆಳಗಾವಿ, ಡಿ.22- ರಾಜ್ಯದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಯಾವುದೇ ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರಿನಲ್ಲೇ 38 ಸಾವಿರ ಎಕರೆ ಒತ್ತುವರಿಯಾಗಿದೆ. ಆದರೆ ರಾಜ್ಯದಲ್ಲಿ ಕೇವಲ 14 ಸಾವಿರ ಎಕರೆ ಎಂದರೆ ಹೇಗೆ ಉತ್ತರ ತಪ್ಪಾಗಿದೆ ಎಂದರು. ಸಚಿವ ಅಶೋಕ್ ಅವರು, ಗೋಮಾಳ ಮಂಜೂರಾತಿ, ಕೃಷಿ ಮಾಡುತ್ತಿರುವುದು, ಸರ್ಕಾರಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಎಲ್ಲವನ್ನೂ ಒತ್ತುವರಿ ಎಂದು ಉಲ್ಲೇಖಿಸಲಾಗಿದೆ. ಆದರೆ ಅಸಲಿಗೆ ಒತ್ತುವರಿಯಾಗಿರುವುದು 28872 ಎಕರೆ ಮಾತ್ರ ಎಂದು ಹೇಳಿದರು.
ಓತ್ತುವರಿ ತೆರವಿಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಸದನ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಶನಿವಾರ ತೆರವು ಕಾರ್ಯಾಚರಣೆ ನಡೆಸಲು ಅಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಭೋಗ್ಯ ಮುಕ್ತಾಯವಾಗಿರುವ ಕುರಿತು ಹೊಸ ಕಾನೂನು ತಂದಿದ್ದೇವೆ. ಅದರ ಪ್ರಕಾರ ಮಾರ್ಗಸೂಚಿ ಬೆಲೆಗೆ ಭೂಮಿಯನ್ನು ಭೋಗ್ಯಕ್ಕೆ ಪಡೆದವರಿಗೆ ಮಾರಾಟ ಮಾಡುತ್ತಿದ್ದೇವೆ. ಎಲ್ಲರಿಗೂ ನೋಟಿಸ್ ನೀಡಿದ್ದೇವೆ. ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಭೋಗ್ಯದ ಅವ ಮುಗಿದ ಭೂಮಿಯನ್ನು ಮೊದಲು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ನಂತರ ಮಾರಾಟ ಮಾಡಲಿದೆ ಎಂದು ಹೇಳಿದರು.
ಭೂ ಕಬಳಿಕೆದಾರರು ನಕಲಿ ದಾಖಲೆಗಳನ್ನು ಸರ್ಕಾರಕ್ಕಿಂತಲೂ ಹೆಚ್ಚು ಕರಾರುವಕ್ಕಾಗಿ ತಯಾರು ಮಾಡುತ್ತಿದ್ದಾರೆ. ಭೂ ಕಬಳಿಕೆದಾರರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡುವ ವಕೀಲರು ಪ್ರತಿ ವಿಚಾರಣೆಗೆ 3 ರಿಂದ 4 ಲಕ್ಷ ಶುಲ್ಕ ಪಡೆಯುತ್ತಾರೆ.
ಸರ್ಕಾರದ ಪರವಾಗಿ ಹಾಜರಾಗುವ ವಕೀಲರು ಹೇಗೆ ವಾದಿಸುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿಯವರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದು ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಬಲವಾಗಿ ವಾದ ಮಂಡಿಸಲಾಗುವುದು ಎಂದರು.
ಒತ್ತುವರಿಯಾಗಿರುವ ಭೂಮಿಯನ್ನು ವಶಕ್ಕೆ ಪಡೆದ ಬಳಿಕ ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲು ಕ್ರಮ ಕೈಗೊಳ್ಳಲಾಗಿದೆ. ಒತ್ತುವರಿಯಾಗಿರುವ ಭೂಮಿಯ ಪೈಕಿ 16995 ಎಕರೆ ತೆರವು ಮಾಡಿಸಬೇಕಿದೆ. ಮುಲಾಜಿಲ್ಲದೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.