ಖರ್ಗೆ ನಾಡಲ್ಲಿ 1.7 ಕೋಟಿ ಜನ ಧನ್ ಖಾತೆ ಓಪನ್, ಮೇಲ್ಮನೆಯಲ್ಲಿ ಕುಟುಕಿದ ಮೋದಿ

ನವದೆಹಲಿ: ಗುರುವಾರವೂ ಸಂಸತ್‌ನಲ್ಲಿ ಪ್ರತಿಪಕ್ಷಗಳ ಟೀಕೆ, ವ್ಯಂಗ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Modi Speech In Rajya Sabha) ಅವರು ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದರು.
“ನಾನು ಕರ್ನಾಟಕಕ್ಕೆ ತೆರಳಿದಾಗಲೆಲ್ಲ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸುತ್ತಾರೆ. ಕಲಬುರಗಿಗೆ ಭೇಟಿ ನೀಡಿದಾಗಲೂ ಅವರು ದೂರುತ್ತಾರೆ. ಆದರೆ, ಖರ್ಗೆ ನಾಡಾದ ಕರ್ನಾಟಕದಲ್ಲಿ ೧.೭ ಕೋಟಿ ಜನ ಧನ್ ಖಾತೆಗಳನ್ನು ತರೆಯಲಾಗಿದೆ. ಅಷ್ಟೇ ಏಕೆ, ಕಲಬುರಗಿಯಲ್ಲೇ ೮ ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಜನರ ಅಭಿವೃದ್ಧಿಯಾದರೆ ತುಂಬ ಜನರಿಗೆ ಖುಷಿಯಾಗುತ್ತದೆ. ಆದರೆ, ಕೆಲವರಿಗೆ ಅದೇ ನೋವುಂಟು ಮಾಡುತ್ತದೆ” ಎಂದು ಕಟಕಿಯಾಡಿದರು.
“ಕಾಂಗ್ರೆಸ್ ಏನೋ, ನಾಲ್ಕು ದಶಕಗಳ ಹಿಂದೆಯೇ ಗರೀಬಿ ಹಠಾವೋ ಎಂಬ ಘೋಷಣೆ ಕೂಗಿತು. ಆದರೆ, ಕಾಂಗ್ರೆಸ್ ನಾಯಕರು ೪೦ ವರ್ಷದಲ್ಲಿ ಬಡವರಿಗಾಗಿ ಏನೂ ಮಾಡಲಿಲ್ಲ. ೬೦ ವರ್ಷದಲ್ಲಿ ಎಲ್ಲ ಅಭಿವೃದ್ಧಿ ಮಾಡಿದ್ದೆವು, ಮೋದಿ ಮಾತ್ರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಖರ್ಗೆ ಸದನದಲ್ಲಿ ಹೇಳಿದ್ದರು. 2014ರಲ್ಲಿ ನಾನು ನೋಡಿದ್ದಾಗ ಎಲ್ಲ ಕಡೆ ಗುಂಡಿಗಳೇ ಬಿದ್ದಿದ್ದವು. ಪ್ರಪಂಚದ ಸಣ್ಣ ಸಣ್ಣ ದೇಶಗಳು ಉತ್ತುಂಗಕ್ಕೆ ಏರುತ್ತಿದ್ದರೆ, ಭಾರತ ಮಾತ್ರ ಅಲ್ಲೇ ಉಳಿದುಕೊಂಡಿತ್ತು” ಎಂದರು.