ಮೈಕ್ರೋಸಾಫ್ಟ್ ಚೇರ್ಮನ್ ಆದ ಸತ್ಯ ನಾದೆಲ್ಲಾ
ನ್ಯೂಯಾರ್ಕ್,ಜೂ.17-ಪ್ರತಿಷ್ಠಿತ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ನಡೆದ ಸಂಸ್ಥೆಯ ನಿರ್ದೇಶಕರ ಸಭೆಯಲ್ಲಿ ಒಕ್ಕೊರಲಿನಿಂದ ನದೆಲ್ಲಾ ಅವರನ್ನು ಮೈಕ್ರೋಸಾಫ್ಟ್ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ನದೆಲ್ಲಾ ಅವರು ಸಿಇಒ ಆಗಿ ಸಂಸ್ಥೆಯ ಲೋಪದೋಷಗಳನ್ನು ಸರಿಪಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ಮುನ್ನಡೆಸಿದ ನೀತಿಯಿಂದಾಗಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ ಎಂದು ಮೈಕ್ರೋಸಾಫ್ಟ್ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
ಇದೇ ಸಂದರ್ಭದಲ್ಲಿ ಜಾನ್ ಡಬ್ಲೂ ಥಾಮ್ಸನ್ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ಮುಂದುವರೆಯಲು ಅನುಮತಿ ನೀಡಲಾಗಿದೆ. ಕಳೆದ 2014 ರಲ್ಲಿ ಸ್ವೀವ್ ಬಲ್ಮರ್ ಅವರಿಂದ ತೆರವಾಗಿದ್ದ ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಒ ಆಗಿ ನದೆಲ್ಲಾ ಅಧಿಕಾರ ಸ್ವೀಕರಿಸಿದ್ದರು.
ಇದೀಗ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳಾಗಿದ್ದು, ತನ್ನ ಷೇರುದಾರರಿಗೆ ತ್ರೈಮಾಸಿಕ ಲಾಭಾಂಶ ಘೋಷಣೆ ಮಾಡಲಾಗಿದೆ.