ಭಾರತದ ನಿಲುವಿಗೆ ಮನ್ನಣೆ; ಅಮೆರಿಕ ಧೋರಣೆಯಲ್ಲಿ ಮಹತ್ವದ ಬದಲಾವಣೆ

ವರ್ಷದ ಹಿಂದೆ, 2022ರ ಫೆಬ್ರವರಿಯಲ್ಲಿ ಯೂಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಜಾಗತಿಕವಾಗಿ ರಾಜಕೀಯವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಬದಲಾವಣೆಗಳಾಗಿವೆ. ಆರ್ಥಿಕ ಹಿಂಜರಿತದ ಪರಿಸ್ಥಿತಿ ಎಲ್ಲೆಡೆ ತಲೆದೋರಿದ ಪರಿಣಾಮವಾಗಿ ಉದ್ಯೋಗನಷ್ಟವೂ ಆಗಿದೆ.
ಇದೀಗ ಅಮೆರಿಕವು ತನ್ನ ಒತ್ತಡಕ್ಕೆ ಮಣಿಯದ ಭಾರತದ ನಿಲುವಿಗೆ ಮಣೆ ಹಾಕಲು ಮುಂದಾಗಿರುವುದು ಭಾರತದ ವಿದೇಶಾಂಗ ನೀತಿಯ ವಿಜಯ ಎಂದೇ ಹೇಳಬಹುದಾಗಿದೆ. ರಷ್ಯಾವನ್ನು ಆರ್ಥಿಕವಾಗಿ ಬಗ್ಗುಬಡಿಯುವ ಉದ್ದೇಶದಿಂದ ಅಮೆರಿಕದ ಜೋ ಬೈಡೆನ್ ಸರ್ಕಾರವು ರಷ್ಯಾ ಮಾತ್ರವಲ್ಲದೆ ಆ ದೇಶದ ಜತೆ ವ್ಯಾಪಾರ ವಹಿವಾಟು ನಡೆಸುವ ದೇಶಗಳ ವಿರುದ್ಧವೂ ಆರ್ಥಿಕ ದಿಗ್ಬಂಧನ ವಿಧಿಸುವ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅನೇಕ ರಾಷ್ಟ್ರಗಳು ರಷ್ಯಾದ ಜತೆಗಿನ ವ್ಯಾಪಾರ ನಿರ್ಬಂಧಿಸಲು ಕ್ರಮ ಕೈಗೊಂಡವು. ಯೂಕ್ರೇನ್ ಆಕ್ರಮಣದ ನಂತರ ರಷ್ಯಾದೊಂದಿಗೆ ಹೆಚ್ಚು ನಿಕಟ ಪಾಲುದಾರಿಕೆ ಮಾಡಿಕೊಳ್ಳದಂತೆ ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ಬೈಡೆನ್ ಅವರ ಉನ್ನತ ಆರ್ಥಿಕ ಸಲಹೆಗಾರ ಬ್ರಿಯಾನ್ ಡೀಸ್ ಅವರು ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಭಾರತವು ರಷ್ಯಾ ಜತೆಗಿನ ಮೈತ್ರಿಸಂಬಂಧವನ್ನು ಮುಂದುವರಿಸುವ ಮೂಲಕ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲವನ್ನು ಅಪಾರ ಪ್ರಮಾಣದಲ್ಲಿ ಖರೀದಿಸಿದ್ದಲ್ಲದೆ, ಅದನ್ನು ಸಂಸ್ಕರಿಸಿ ಹಲವಾರು ರಾಷ್ಟ್ರಗಳಿಗೆ ಮಾರಿ ಲಾಭ ಮಾಡಿಕೊಳ್ಳುವುದನ್ನು ಈಗಲೂ ಮುಂದುವರಿಸಿದೆ. ರಷ್ಯಾ ತೈಲ ಖರೀದಿ ವಿಷಯದಲ್ಲಿ ಭಾರತದೊಂದಿಗೆ ಈಗ ಅಮೆರಿಕ ಮೆದು ನಿಲುವು ತಾಳಿದೆ. 'ಭಾರತದ ವಿರುದ್ಧ ನಿರ್ಬಂಧ ವಿಧಿಸುವುದಿಲ್ಲ. ಭಾರತವು ಅಮೆರಿಕದ ಬಹುಮುಖ್ಯ ಪಾಲುದಾರ ರಾಷ್ಟ್ರವಾಗಿದೆ' ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಕರನ್ ಡಾನ್ಫೈ›ಡ್ ಹೇಳಿರುವುದು ಇದನ್ನೇ ಸೂಚಿಸುತ್ತದೆ.
ಇದೇ ವೇಳೆ ಇನ್ನೊಂದು ಮಹತ್ತರ ಬದಲಾವಣೆ ಕೂಡ ಬೈಡೆನ್ ಆಡಳಿತದಲ್ಲಿ ಕಂಡುಬಂದಿದೆ. ಎಚ್1ಬಿ ವೀಸಾ ನವೀಕರಣ ಸಹಿತ ಹಲವು ನಿಯಮ ಸರಳಗೊಳಿಸಲು ಅಮೆರಿಕ ನಿರ್ಧರಿಸಿದೆ. ಎಚ್1ಬಿ ವೀಸಾ ಪಡೆದುಕೊಳ್ಳುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದು, ಅಮೆರಿಕದಲ್ಲಿ ಉದ್ಯೋಗ ಮಾಡಬಯಸುವವರಿಗೆ ಇದು ಅತ್ಯಗತ್ಯ. ವೀಸಾ ಪಡೆದುಕೊಳ್ಳಲು ವರ್ಷಾನುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಕುರಿತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಈಚೆಗೆ ಪ್ರಸ್ತಾಪಿಸಿದ್ದರು. ಒಟ್ಟಾರೆಯಾಗಿ, ಭಾರತ ತನ್ನ ತಟಸ್ಥ ಧೋರಣೆ ಮುಂದುವರಿಸಿಕೊಂಡು, ಹಿತಾಸಕ್ತಿ ಕಾಯ್ದುಕೊಳ್ಳುವಂತಹ ವಿದೇಶಾಂಗ ನೀತಿಯನ್ನು ಅನುಸರಿಸಿ ಯಶಸ್ಸು ಕಾಣುತ್ತಿರುವುದು ಗಮನಾರ್ಹ.