ಮಣಿಪುರದ 12 ಶಾಸಕರ ಅನರ್ಹತೆ ಪ್ರಕರಣ; ಶೀಘ್ರವೇ ನಿರ್ಧಾರ -'ಸುಪ್ರೀಂ'ಗೆ ಭರವಸೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಅಭಿಪ್ರಾಯವನ್ನು ಆಧರಿಸಿ 'ಲಾಭದಾಯಕ ಹುದ್ದೆ'ಗೆ ಸಂಬಂಧಿಸಿದಂತೆ 12 ಶಾಸಕರ ಅನರ್ಹತೆ ಕುರಿತ ಪ್ರಕರಣದಲ್ಲಿ ಮಣಿಪುರದ ರಾಜ್ಯಪಾಲರು ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವರು ಎಂದು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಲಾಗಿದೆ.
ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ನೇತೃತ್ವದ ಪೀಠವು, 'ರಾಜ್ಯಪಾಲರು ಏನು ತೀರ್ಮಾನ ಕೈಗೊಂಡಿದ್ದಾರೆ' ಎಂದು ಪ್ರಶ್ನಿಸಿದಾಗ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಭರವಸೆ ನೀಡಿದರು.
'ಚುನಾವಣಾ ಆಯೋಗ ಜನವರಿ ತಿಂಗಳಲ್ಲಿ ಭರವಸೆ ನೀಡಿದೆ. ವಿಧಿ 192ರ ಅನ್ವಯ ರಾಜ್ಯಪಾಲರು ತೀರ್ಮಾನ ತೆಗೆದುಕೊಳ್ಳಬೇಕಿದೆ. 11 ತಿಂಗಳಿನಿಂದ ಏನೂ ಆಗಿಲ್ಲ. ಈ ಬಗ್ಗೆ ಆದೇಶ ಹೊರಡಿಸಲು ನಾವು ಬಯಸುವುದಿಲ್ಲ. ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿ' ಎಂದು ಪೀಠವು ಹೇಳಿತು.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರು ಪೀಠದ ಇತರ ಸದಸ್ಯರು. 'ಈ ಕುರಿತು ಏನಾದರೂ ತೀರ್ಮಾನ ತೆಗೆದುಕೊಳ್ಳಲಾಗುವುದು. ಯಾವುದೇ ಸ್ಪಷ್ಟ ನಿರ್ದೇಶನ ಬೇಡ' ಎಂದು ಮೆಹ್ತಾ ಅವರು ಕೋರಿದರು.