ಚಿತ್ರದುರ್ಗದಲ್ಲಿ ರಣಕಹಳೆ ಮೊಳಗಿಸಿದ ವಾಲ್ಮೀಕಿ ಸಮುದಾಯ |Chitradurga|

ರಾಜ್ಯದ ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ಶಿಫಾರಸು ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಸರ್ಕಾರ ಕುತಂತ್ರ ಮಾಡಿ ತ್ರಿಸದಸ್ಯ ಸಮಿತಿ ರಚಿಸಿ ದ್ರೋಹ ಬಗೆಯುತ್ತಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕಲಾಗುವುದು ಎಂದು ವಾಲ್ಮೀಕಿ ಸಮುದಾಯದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೋಟೆ ನಾಡು ಚಿತ್ರದುರ್ಗದಲ್ಲಿ ಮೀಸಲಾತಿಗಾಗಿ ಸಾಮೂಹಿಕ ನಾಯಕತ್ವದಡಿ ಸಮಾನ ಮನಸ್ಕರು ಸಭೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಸರ್ಕಾರ, ರಾಜಕೀಯ ನಾಯಕರು ನಮ್ಮ ಸಮುದಾಯದ ಸಾಮಾನ್ಯ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ದಾಳಕ್ಕೆ ನಮ್ಮ ಸಮುದಾಯದ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಯುವಕರನ್ನು ಬೆಳೆಸುವುದಾಗಲಿ, ಸಮುದಾಯದ ಜನರಿಗೆ ಮೀಸಲಾತಿ ಕೊಡಿಸುವ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಇವರಿಗೆಲ್ಲ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಇದೇ ಕಾರಣಕ್ಕೆ ನಮ್ಮ ಸಮುದಾಯ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಇದೆ ಸಂದರ್ಭದಲ್ಲಿ ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಮೇಶ್ ಹಿರೇಜಂಬೂರು ಮಾತನಾಡಿ, ಈ ರಾಜ್ಯ ಸರ್ಕಾರಶೇ.7.5 ಮೀಸಲಾತಿ ವಿಚಾರದಲ್ಲಿ ಸಂವಿಧಾನ ವಿರೋಧಿ ನಿರ್ಧಾರ ಕೈಗೊಂಡಿದೆ. ಒಬ್ಬರು ನ್ಯಾಯಮೂರ್ತಿ ನೀಡಿದ ವರದಿಯನ್ನು ಪರಿಶೀಲಿಸಲು ಮತ್ತೊಬ್ಬರು ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಸಮಿತಿ ರಚಿಸಿದ್ದುತಪ್ಪು. ಆದರೆ ತ್ರಿಸದಸ್ಯ ಸಮಿತಿಗೆ ಶೇ.7.5 ಮೀಸಲಾತಿ ವಿಚಾರವನ್ನೂ ನೀಡಿದ್ದು ಅಸಂವಿಧಾನಿಕ. ಇಷ್ಟು ದಿನ ಮೀಸಲಾತಿ ಕೊಟ್ಟೇ ಕೊಡ್ತೀವಿ ಎಂದಿದ್ದವರು ಈಗ ಹೊಸ ಕಥೆ ಸೃಷ್ಟಿ ಮಾಡುತ್ತಿದ್ದಾರೆ. ಪರಿಶಿಷ್ಟ ಸಮುದಾಯದ ಅಮಾಯಕ ಜನರನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ರಿದ್ದಾರೆ. ನಮ್ಮ ಸಮುದಾಯದ ನಾಗರಿಕರು ಸಹನೆಯುಳ್ಳವರು, ಆದರೆ ದಡ್ಡರಲ್ಲ. ಸಹನೆಯ ಕಟ್ಟೆಯೊಡೆದಾಗ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು. ಬೆಳಗಾವಿ ಅಧಿವೇಶನದಲ್ಲಿ ಶೇ.7.5 ಮೀಸಲಾತಿ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಬೇಕಾಗಿದೆ. ಸಭೆಯಲ್ಲಿ ಯುವ ಮುಖಂಡರಾದ ಭಾರತೀ ನಾಯಕ್, ಬಸವಾಪುರ ರಂಗನಾಥ್ ನಾಯಕ್, ಪ್ರಶಾಂತ್ ನಾಯಕ್, ಮಂಜುಳಾ ಶ್ರೀನಿವಾಸ್ ನಾಯಕ್, ರಜನಿ ಎಂ.ಆರ್., ಕೆಂಚಮ್ಮ, ಕವಿತಾ, ಅಶೋಕ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.