ರಾಜ್ಯ ಹಿಂದುಳಿದ ವರ್ಗ'ಗಳ 'ಮೀಸಲಾತಿ ಪ್ರಮಾಣ' ಮರು ವರ್ಗೀಕರಿಸಿ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳಿಗೆ ( Backward Classes ) ಶಿಕ್ಷಣ ಮತ್ತು ಉದ್ಯೋಗದಲ್ಲಿ ( Education and Jobs ) ಕಲ್ಪಿಸಿರುವ ಮೀಸಲಾತಿಯನ್ನು ಮರು ವರ್ಗೀಕರಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ನಡವಾಳಿ ಹೊರಡಿಸಿದ್ದು, ರಾಜ್ಯ ಹಿಂದುಳಿದ ವರ್ಗಗಳನ್ನು ಗುರುತಿಸಿ ಪ್ರವರ್ಗ-1, ಪ್ರವರ್ಗ-1ಎ, 2ಬಿ, 3ಎ ಮತ್ 3ಬಿ ಎಂದು ವರ್ಗೀಕರಿಸಿ, ಸದರಿ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಅನುಸಾರ ಪ್ರವರ್ಗಗಳಲ್ಲಿ ಸೇರ್ಪಡೆ ಮಾಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ ಎಂಬುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪಂಚಮಸಾಲಿ ವೀರಶೈವ ಲಿಂಗಾಯಿತ, ಒಕ್ಕಲಿಗೆ, ಮರಾಠ ಹಾಗೂ ಇನ್ನಿತರೆ ಸಮುದಾಯಗಳ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಹಾಗೂ ಮೀಸಲಾತಿಯನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿರುತ್ತದೆ. ಸುಮಾರು 20 ವರ್ಷಗ ಕಳೆದರೂ ಆಯೋಗದಿಂದ ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆಯ ಕಾರ್ಯ ಕೈಗೊಂಡಿರುವುದಿಲ್ಲ. ಹೀಗಾಗಿ ಪಟ್ಟಿಯನ್ನು ಪರಿಷ್ಕರಿಸುವ ಹಾಗೂ ಪುನರ್ ವರ್ಗೀಕರಣ ಕೈಗೊಳ್ಳುವ ಅವಶ್ಯವಿರುತ್ತದೆ ಎಂದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗವು ಮೀಸಲಾತಿಯ ಪಟ್ಟಿಯಲ್ಲಿ ಹೊಸದಾಗಿ ಸೇರಿಸಲು ಹಾಗೂ ವರ್ಗಾಯಿಸಲು ಪಂಚಮಸಾಲಿ, ಲಿಂಗಾಯಿತ, ಮರಾಠ ಹಾಗೂ ಇತರೆ ಸಮುದಾಯವೂ ಸೇರಿದಂತೆ ರಾಜ್ಯ ಒಕ್ಕಲಿಗರ ಸಂಘ ಹಾಗೂ ಇತರೆ ಅನೇಕ ಸಂಘಗಳು ಸಲ್ಲಿಸಿರುವ ಬೇಡಿಕೆಯನ್ನು ಕಾನೂನು, ಸಂವಿಧಾನದ ಮತ್ತು ಸರ್ವೋಚ್ಛ ನ್ಯಾಯಾಲಯ ಇಂತಹ ಪ್ರಕರಣಗಳಲ್ಲಿ ನೀಡಿದ ತೀರ್ಪಿನ ಅಡಿಯಲ್ಲಿ ಪರಿಶೀಲಿಸಬೇಕಾಗಿರುತ್ತದೆ ಎಂದಿದ್ದಾರೆ.
3ಎ ಸಮುದಾಯವನ್ನು ( ಒಕ್ಕಲಿಗ ಹಾಗೂ ಇತರೆ ಸಮುದಾಯಗಳ) ಪ್ರವರ್ಗ-2 ಅಂದರೇ More Backward ಎಂದು ಪರಿಗಣಿಸಿ 2ಸಿ ಎಂಬ ಒಂದು ಹೊಸ ಪ್ರವರ್ಗವನ್ನು ಸೃಜಿಸುವುದು. 3ಬಿ ( ಪಂಚಮಸಾಲಿ, ಲಿಂಗಾಯತ ವೀರಶೈವ ಹಾಗೂ ಇತರೆ ಸಮುದಾಯಗಳು)ವನ್ನು ಪ್ರವರ್ಗ-2 ಅಂದರೇ More Backward ಎಂದು ಪರಿಗಣಿಸಿ 2ಡಿ ಎಂಬ ಒಂದು ಹೊಸ ಪ್ರವರ್ಗವನ್ನು ಸೃಜಿಸುವುದು ಎಂದಿದ್ದಾರೆ.
ಈ ಹೊಸದಾಗಿ ಸೃಜಿಸುವ 2ಸಿ ಮತ್ತು 2ಡಿ ಮೀಸಲಾತಿಯನ್ನು ಹೆಚ್ಚಿಸುವ ಅವಕಾಶವನ್ನು ಈಗಾಗಲೇ ಅತ್ಯಂತ ಹಿಂದುಳಿದ ಪ್ರವರ್ಗ-1 ಹಾಗೂ 2ಎಗೆ ಧಕ್ಕೆ ಹಾಗೂ ಬದಲಾವಣೆ ಆಗದಂತೆ ಕಟ್ಟು ನಿಟ್ಟಾಗಿ ನೋಡಿಕೊಳ್ಳತಕ್ಕದ್ದು ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.
ಪ್ರಸ್ತಾವನೆಯ ಹಿನ್ನಲೆಯಲ್ಲಿ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ದೃಷ್ಠಿಯಿಂದ ಹಿಂದುಳಿದ ವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ಪುನರ್ ವರ್ಗೀಕರಿಸಿ, ಮೀಸಲಾತಿ ಪ್ರಮಾಣವನ್ನು ಯಥಾವತ್ತಾಗಿ ಮುಂದುವರೆಸುವಂತೆ ಆದೇಶಿಸಿದ್ದಾರೆ.
ಹೀಗಿದೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಪುನರ್ ವರ್ಗೀಕೃತ ಪಟ್ಟಿ
ಕ್ಯಾಟಗರಿ-1 ಶೇ.4 - ಅತ್ಯಂತ ಹಿಂದುಳಿದವರು.
ಕ್ಯಾಟಗರಿ -2ಎ ಶೇ.15ರಷ್ಟು - ಅತ್ಯಂತ ಹಿಂದುಳಿದವರು.
ಕ್ಯಾಟಗರಿ 2ಬಿ - 0% —
ಕ್ಯಾಟಗರಿ 2ಸಿ- ಶೇ.6ರಷ್ಟು - ಅತೀ ಹಿಂದುಳಿದವರು. ಒಕ್ಕಲಿಗ ಮತ್ತು ಇತರೆ ಜಾತಿಗಳು
ಕ್ಯಾಟಗರಿ 2ಡಿ- ಶೇ.7ರಷ್ಟು - ಅತೀ ಹಿಂದುಳಿದವರು. ಲಿಂಗಾಯತ, ವೀರಶೈವ ಪಂಚಮಸಾಲಿ ಮತ್ತು ಇತರೆ ಜಾತಿಗಳು.
ವರದಿ: ವಸಂತ ಬಿ ಈಶ್ವರಗೆರೆ