ಹುಬ್ಬಳ್ಳಿಯಲ್ಲಿ ಕಾರು ಪಲ್ಟಿ: ಮೂವರ ದುರ್ಮರಣ, ಓರ್ವ ಮಹಿಳೆಯ ಸ್ಥಿತಿ ಗಂಭೀರ

ಹುಬ್ಬಳ್ಳಿಯಲ್ಲಿ ಕಾರು ಪಲ್ಟಿ: ಮೂವರ ದುರ್ಮರಣ, ಓರ್ವ ಮಹಿಳೆಯ ಸ್ಥಿತಿ ಗಂಭೀರ

ಹುಬ್ಬಳ್ಳಿ: ಕಾರು ಪಲ್ಟಿಯಾಗಿ ಮೂವರು ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ವರೂರ ಗ್ರಾಮದ ಗಣೇಶ ಹೋಟೆಲ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣತಪ್ಪಿ ಪಲ್ಟಿಯಾಗಿದೆ.

ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೋಹೆಲ್​(26) ಮತ್ತು ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ಎಚ್.ಕೆ. ಸುಶೀಲಾ (38) ಮೃತರು.

ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ಮಂಗಳವಾರ ರಾತ್ರಿ ಹುಬ್ಬಳ್ಳಿ ಕಡೆಗೆ ಕಾರಿನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ನಾಲ್ಕೈದು ಬಾರಿ ಪಲ್ಟಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸುಶೀಲಾಮ ಶಾರುಖ್​ ಮತ್ತು ಸೋಹೆಲ್​ ದುರಂತ ಅಂತ್ಯ ಕಂಡಿದ್ದು, ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೊರಾಡುತ್ತಿರುವ ಫಾರುಕ್ ಎಂಬಾಕೆಯನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.