ಬಿಜೆಪಿ ಬಿಟ್ಟು ಜನಾರ್ದನ ರೆಡ್ಡಿ ಪಕ್ಷ ಸೇರಿದ ಯಡಿಯೂರಪ್ಪ ಆಪ್ತ!

ಬಿಜೆಪಿ ಬಿಟ್ಟು ಜನಾರ್ದನ ರೆಡ್ಡಿ ಪಕ್ಷ ಸೇರಿದ ಯಡಿಯೂರಪ್ಪ ಆಪ್ತ!

ಬೆಂಗಳೂರು, ಮಾರ್ಚ್ 23; ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಪಕ್ಷ ಸ್ಥಾಪನೆ ಮಾಡಿರುವ ಜನಾರ್ದನ ರೆಡ್ಡಿ ಸಂಘಟನೆಗೆ ಒತ್ತು ನೀಡಿದ್ದು, ಪಕ್ಷದ ಯುವ ಘಟಕಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ.

ಬಿಜೆಪಿ ಯುವ ಮೋರ್ಚಾದ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷರು ಈಗ ಬಿಜೆಪಿ ತೊರೆದು ಜನಾರ್ದನ ರೆಡ್ಡಿ ಪಕ್ಷವನ್ನು ಸೇರಿದ್ದಾರೆ.

ಭೀಮಾಶಂಕರ ಪಾಟೀಲ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ನೇಮಕಾತಿ ಪತ್ರವನ್ನು ನೀಡಿದ್ದಾರೆ. ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಭೀಮಾಶಂಕರ ಪಾಟೀಲ್ ಬಿಜೆಪಿ ಬಿಟ್ಟು ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರಾಗಿದ್ದ ಭೀಮಾಶಂಕರ ಪಾಟೀಲ್ ಕಳೆದ 20 ವರ್ಷಗಳಿಂದ ಸಾಮಾಜಿಕ ಹೋರಾಟ, ಕನ್ನಡಪರ ಹೋರಾಟಗಳ ಮೂಲಕ ಸಾರ್ವಜನಿಕ ಜೀವನದಲ್ಲಿದ್ದಾರೆ. ಕರ್ನಾಟಕ ನವನಿರ್ಮಾಣ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆಗಿದ್ದಾರೆ. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರು ಈಗ ಬಿಜೆಪಿ ತೊರೆದಿದ್ದಾರೆ.

ಬಿಜೆಪಿಯಲ್ಲಿದ್ದಾಗ ಬೆಳಗಾವಿ ಗ್ರಾಮೀಣ, ಚಿಕ್ಕೋಡಿ ಜಿಲ್ಲೆಗಳ ಪ್ರಭಾರಿಗಳಾಗಿ ಮತ್ತು ಗೋವಾ ಚುನಾವಣಾ ಉಸ್ತುವಾರಿಗಳಾಗಿ ಕೆಲಸ ಮಾಡಿದ್ದರು ಭೀಮಾಶಂಕರ ಪಾಟೀಲ್. ಈ ಬಾರಿಯ ಚುನಾವಣೆಗೆ ಆಳಂದ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಟಿಕೆಟ್ ಘೋಷಣೆಗೂ ಮೊದಲೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.