ಪಂಚಮಸಾಲಿಗೆ ಸಿಗುವುದೇ ಮೀಸಲಾತಿ? ಇಂದು ಬೊಮ್ಮಾಯಿ ಸರಕಾರದ ಕೊನೇ ಸಂಪುಟ ಸಭೆ

ಪಂಚಮಸಾಲಿಗೆ ಸಿಗುವುದೇ ಮೀಸಲಾತಿ? ಇಂದು ಬೊಮ್ಮಾಯಿ ಸರಕಾರದ ಕೊನೇ ಸಂಪುಟ ಸಭೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಕೊನೆಯ ಸಂಪುಟ ಸಭೆ ಶುಕ್ರವಾರ ನಡೆಯಲಿದ್ದು, ಸರಕಾರಕ್ಕೆ ಬಿಸಿತುಪ್ಪವಾಗಿರುವ “ಮೀಸಲು ಗೋಜಲಿಗೆ’ ಪರಿಹಾರ ಲಭಿಸುವ ಸಾಧ್ಯತೆ ಇದೆ.

ಪರಿಶಿಷ್ಟ ಜಾತಿ ಒಳಮೀಸಲು ವಿಚಾರ, ಪಂಚಮಸಾಲಿ ಹಾಗೂ ಒಕ್ಕಲಿಗರ ಮೀಸಲು ವಿವಾದವನ್ನು ಈ ಸಂಪುಟ ಸಭೆಯಲ್ಲಿ ಇತ್ಯರ್ಥಪಡಿಸುವುದಕ್ಕೆ ಬೊಮ್ಮಾಯಿ ನಿರ್ಧರಿಸಿದ್ದು, ಸಂಪುಟದ ಅಜೆಂಡಾದಲ್ಲಿ ಈ ಮೂರು ವಿಚಾರಗಳು ಅಡಕವಾಗಿವೆ ಎಂದು ತಿಳಿದು ಬಂದಿದೆ.

ಜತೆಗೆ ಪ್ರಮುಖ ನೀರಾವರಿ ಯೋಜನೆಗಳು ಸೇರಿದಂತೆ ಭಾರೀ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ಲಭಿಸಲಿದೆ.

ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಬೇಡಿಕೆ ಕಳೆದ 2 ವರ್ಷಗಳಿಂದ ಸರಕಾರವನ್ನು ಕಾಡುತ್ತಿದೆ. ಒಕ್ಕಲಿಗರೂ ಮೀಸಲು ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಈ ಎರಡು ಸಮುದಾಯಕ್ಕೆ 2ಸಿ, 2ಡಿ ಪ್ರವರ್ಗ ಸೃಷ್ಟಿಸಿ ಮೀಸಲು ಸೌಲಭ್ಯ ನೀಡಬಹುದು ಎಂದು ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಸರಕಾರಕ್ಕೆ ಮಧ್ಯಾಂತರ ವರದಿ ನೀಡಿದೆ. ಆದರೆ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯ ಮಧ್ಯಾಂತರ ಆದೇಶವನ್ನು ಮಾರ್ಪಾಡು ಮಾಡಿರುವುದರಿಂದ ಸರಕಾರ ನಿಟ್ಟುಸಿರು ಬಿಡುವಂತಾಗಿದೆ. ಮೀಸಲು ವಿಚಾರದಲ್ಲಿ ಪಂಚಮಸಾಲಿ ಸಮುದಾಯದ ಒತ್ತಡ ಹೆಚ್ಚಿರುವುದರಿಂದ ಕೊನೆಯ ಸಂಪುಟ ಸಭೆಯಲ್ಲೇ ತೀರ್ಮಾನಕ್ಕೆ ಬರಲು ಸರಕಾರ ನಿರ್ಧರಿಸಿದೆ.

ಕೊಡುಗೆ ನಿರೀಕ್ಷೆ
ಈ ಮಧ್ಯೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮೀಜಿ ಬೆಂಗಳೂರಿನಲ್ಲಿ ಮಾತನಾಡಿ, “ಪಂಚಮಸಾಲಿ ಸಮುದಾಯಕ್ಕೆ ಸರಕಾರದಿಂದ ಅತ್ಯುತ್ತಮ ಕೊಡುಗೆ ಶುಕ್ರವಾರ ಘೋಷಣೆಯಾಗುವ ವಿಶ್ವಾಸವಿದೆ’ ಎಂದಿದ್ದಾರೆ. ಪ್ರವರ್ಗ ಯಾವುದಾದರೂ ಇರಲಿ ನಮ್ಮ ಸಮುದಾಯಕ್ಕೆ ಮೀಸಲು ಅತ್ಯಾವಶ್ಯಕ ಎಂದು ಪ್ರತಿಪಾದಿಸಿದ್ದಾರೆ.

ಒಳಮೀಸಲು
ಪರಿಶಿಷ್ಟ ಜಾತಿಗೆ ಒಳಮೀಸಲು ಸೌಲಭ್ಯ ಕಲ್ಪಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾ| ಸದಾಶಿವ ಆಯೋಗದ ವರದಿ ಅನುಷ್ಠಾನ ವಿವಾದವನ್ನೂ ಸರಕಾರ ಇದೇ ಸಂಪುಟ ಸಭೆಯಲ್ಲಿ ಇತ್ಯರ್ಥಗೊಳಿಸುತ್ತದೆ ಎನ್ನಲಾಗಿದೆ. ಈ ಮೂಲಕ ದಲಿತ ಸಮುದಾಯದಲ್ಲಿ ಬಹುವರ್ಷಗಳಿಂದ ಜೀವಂತವಾಗಿದ್ದ ವಿವಾದ ಹಾಗೂ ಬೇಡಿಕೆಯನ್ನು ಸರಕಾರ ತಣ್ಣಗಾಗಿಸುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ಮೌನ
ಬಹುಚರ್ಚಿತವಾದ ಈ ಮೂರು ವಿಚಾರಗಳನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ಬಿಜೆಪಿ ಪ್ರಯತ್ನಿಸುತ್ತಿದ್ದರೂ ಕಾಂಗ್ರೆಸ್‌ ಮಾತ್ರ ಮೌನಕ್ಕೆ ಶರಣಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೊರತುಪಡಿಸಿ ಬೇರ್ಯಾರೂ ಗಟ್ಟಿ ಧ್ವನಿಯಲ್ಲಿ ಮಾತನಾಡಿಲ್ಲ. ಒಳಮೀಸಲು ವಿಚಾರದಲ್ಲಿ ಸರಕಾರ ದಲಿತ ಸಮುದಾಯದ ಕಿವಿಯಲ್ಲಿ ಹೂವಿಡುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಯಥಾಸ್ಥಿತಿ ಆದೇಶ ತೆರವು
ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಚಾರವಾಗಿ ಚುನಾವಣೆ ಹೊಸ್ತಿಲಲ್ಲಿ ಸರಕಾರಕ್ಕೆ ಬಲ ಸಿಕ್ಕಂತಾಗಿದ್ದು, ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2-ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ್ದ ಮಧ್ಯಾಂತರ ಆದೇಶವನ್ನು ಹೈಕೋರ್ಟ್‌ ತೆರವುಗೊಳಿಸಿದೆ. ಈಗಿರುವ ಪ್ರವರ್ಗ 2-ಎ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಮಾಡುವುದಿಲ್ಲ ಮತ್ತು ಈ ಸಂಬಂಧ 2022ರಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಮಾರ್ಪಾಡು ಮಾಡುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಯಥಾಸ್ಥಿತಿ ಆದೇಶವನ್ನು ಮಾರ್ಪಡಿಸಿದ ಹೈಕೋರ್ಟ್‌ ಮಧ್ಯಾಂತರ ತಡೆಯನ್ನು ತೆರವುಗೊಳಿಸಿ ಆದೇಶಿಸಿತು.