ಮೃತ್ಯುಕೂಪವಾದ ಬೆಂಗಳೂರು ರಸ್ತೆಗುಂಡಿಗಳು!
ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ವನಿತಾ (22) ಎಂಬುವವರ ಬೈಕ್ ಸೋಮವಾರ ಬೆಳಿಗ್ಗೆ ಅಪಘಾತಕ್ಕೀಡಾಗಿದೆ. ವನಿತಾ ಗಾಯಗೊಂಡಿದ್ದು, ಹಿಂಬದಿ ಸವಾರರಾಗಿದ್ದ ಅವರ ತಾಯಿ ಉಮಾದೇವಿ (42) ಸ್ಥಿತಿ ಗಂಭೀರವಾಗಿದೆ.
ಸ್ಕೂಟಿಯಲ್ಲಿ ಸಾಗುತ್ತಿದ್ದಾಗ ರಾಜಾಜಿನಗರದ ಲುಲು ಗ್ಲೋಬಲ್ ಮಾಲ್ ಬಳಿ ಗುಂಡಿ ತಪ್ಪಿಸಲು ವನಿತಾ ಸ್ಕೂಟಿಯನ್ನು ಬಲಭಾಗಕ್ಕೆ ಚಲಾಯಿಸಿದರು.
ಉಮಾದೇವಿ ಅವರು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ವಸಂತನಗರದ ಉಮಾದೇವಿ ಹೋಂ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಶ್ರೀನಗರದ ಪುತ್ರಿಯ ಮನೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ಪುತ್ರಿಯ ಮನೆಯಿಂದ ಸ್ಕೂಟಿಯಲ್ಲಿ ಬರುತ್ತಿರುವಾಗ ಈ ಘಟನೆ ನಡೆದಿದೆ' ಎಂದು ಕುಟುಂಬದ ಸದಸ್ಯರು ತಿಳಿಸಿದರು.
ಪ್ರತಿಭಟನೆ, ಆಕ್ರೋಶ: ಬಿಬಿಎಂಪಿ ನಿರ್ಲಕ್ಷ್ಯ ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆಯಲ್ಲಿ ಬಿದ್ದಗುಂಡಿಗಳಲ್ಲಿ ಉರುಳು ಸೇವೆ ನಡೆಸಿ ಪ್ರತಿಭಟಿಸಿ ದರು. ಸ್ಥಳೀಯರೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆತಡೆ ನಡೆಸಲು ಮುಂದಾದ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿದರು.
ನಗರ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ರಮೇಶ್, ದಿನೇಶ್, ವೇಣುಗೋಪಾಲ್ ಹಾಜರಿದ್ದರು. ಕಾರ್ಪೊರೇಷನ್ ರಸ್ತೆಯಲ್ಲೂ ಗುಂಡಿಗಳು ಬಿದ್ದಿದ್ದು, ಭಾನುವಾರ ರಾತ್ರಿ ಬೈಕ್‌ನಲ್ಲಿ ತೆರಳುವಾಗ ವ್ಯಕ್ತಿ ಆಯತಪ್ಪಿ ಬಿದ್ದು ಅವರ ಕಾಲಿಗೂ ಗಾಯವಾಗಿದೆ. ವಾಟಾಳ್ ನಾಗರಾಜ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತ ದುರದೃಷ್ಟಕರ ಎಂದು ಶಾಸಕ ಎಸ್.ಸುರೇಶ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ.
'ಶಿಲ್ಪಶ್ರೀ ಚೇತರಿಕೆಗೆ ಸಮಯ ಬೇಕು'
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಈಚೆಗೆ ಬಿಎಂಟಿಸಿ ಬಸ್ ಮೈ ಮೇಲೆ ಹರಿದ ಪರಿಣಾಮ ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿನಿ ಶಿಲ್ಪಶ್ರೀ (22) ಅವರು ಚೇತರಿಸಿಕೊಳ್ಳಲು ಇನ್ನೂ ಕಾಲಾವಕಾಶ ಬೇಕಿದೆ ಎಂದು ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆಯ ಡಿ.ಕೆ.ಹಳ್ಳಿ ಬಳಿಯ ದಾಸರಹಳ್ಳಿ ನಿವಾಸಿ ಶಿಲ್ಪಶ್ರೀ, ಬೆಂಗಳೂರು ವಿವಿ ಗಣಿತ ವಿಭಾಗದಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಬಸ್ ಹತ್ತುವುದಕ್ಕೂ ಮುನ್ನವೇ ಬಸ್ ಮುಂದಕ್ಕೆ ಚಲಿಸಿತ್ತು. ಶಿಲ್ಪಶ್ರೀ ಆಯತಪ್ಪಿ ಬಿದ್ದಿದ್ದರು.
'ವರದಿ ಆಧರಿಸಿ ಕ್ರಮ'
'ಲುಲು ಮಾಲ್ ಬಳಿ ಸಂಭವಿಸಿರುವ ಅಪಘಾತದಲ್ಲಿ ಪೊಲೀಸರಿಂದ ಬರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮಿಂದ ತೊಂದರೆಯಾಗಿ ಅಪಘಾತವಾಗಿದ್ದರೆ ಪರಿಹಾರ ನೀಡಲಾಗುತ್ತದೆ. ನಂತರ ಶಿಸ್ತುಕ್ರಮದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.