ರಾಜ್ಯ ಸರ್ಕಾರದಿಂದ ದಿಢೀರ್ ನಿರ್ಧಾರ; ಬಿಜೆಪಿ‌ಯ ಹಿರಿಯ ಶಾಸಕರಿಬ್ಬರಿಗೆ ಒಲಿಯಿತು ವಿಶೇಷ ಸ್ಥಾನಮಾನ

ರಾಜ್ಯ ಸರ್ಕಾರದಿಂದ ದಿಢೀರ್ ನಿರ್ಧಾರ; ಬಿಜೆಪಿ‌ಯ ಹಿರಿಯ ಶಾಸಕರಿಬ್ಬರಿಗೆ ಒಲಿಯಿತು ವಿಶೇಷ ಸ್ಥಾನಮಾನ

ಬೆಂಗಳೂರು: ರಾಜ್ಯ ಸರ್ಕಾರ ದಿಢೀರ್ ನಿರ್ಧಾರವನ್ನು ಕೈಗೊಂಡ ಪರಿಣಾಮವಾಗಿ ಬಿಜೆಪಿಯ ಇಬ್ಬರು ಹಿರಿಯ ಶಾಸಕರಿಗೆ ಮತ್ತೊಂದು ಸ್ಥಾನಮಾನ ದೊರೆತಿದೆ. ಈ ಕುರಿತು ರಾಜ್ಯ ಸರ್ಕಾರ ಇಂದು ಆದೇಶವೊಂದನ್ನು ಹೊರಡಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಅಧಿಕಾರೇತರ ಸದಸ್ಯರನ್ನಾಗಿ ಶಾಸಕರಾದ ರವಿಸುಬ್ರಹ್ಮಣ್ಯ ಹಾಗೂ ಎಸ್.ರಘು ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಊಹಾಪೋಹಗಳ ಮಧ್ಯೆಯೇ ಈ ಇಬ್ಬರೂ ಬಿಜೆಪಿ ಶಾಸಕರನ್ನು ಬಿಡಿಎ ಸದಸ್ಯರನ್ನಾಗಿ ನೇಮಕ ಮಾಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಇಷ್ಟು ದಿನ ಮಾಡದ ನೇಮಕವನ್ನು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ರಾಜಧಾನಿಯ ಶಾಸಕರಿಗೆ ಪ್ರತಿಷ್ಠಿತ ಸ್ಥಾನಮಾನ ನೀಡಿರುವುದು ಆಡಳಿತಾರೂಢ ಬಿಜೆಪಿ ಪಕ್ಷದವರಲ್ಲಿ ನಿಗಮ-ಮಂಡಳಿ ನೇಮಕದ ಹೊಸ ಆಶಾಕಿರಣ ಮೂಡಿಸಿದಂತಿದೆ.

ಪ್ರಸ್ತುತ ಬಿಡಿಎ ಅಧ್ಯಕ್ಷರಾಗಿ ಯಲಹಂಕ ಮತಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಒಂದೂವರೆ ವರ್ಷದ ಹಿಂದೆಯೇ ನೇಮಕಗೊಂಡಿದ್ದಾರೆ. ಆಗಲೇ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಎಸ್.ರಘು, ಅರವಿಂದ ಲಿಂಬಾವಳಿ ಅವರನ್ನು ಬಿಡಿಎ ಸದಸ್ಯರನ್ನಾಗಿ ನೇಮಿಸುವ ಚರ್ಚೆ ನಡೆದಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಆಡಳಿತ ಪಕ್ಷದ ಶಾಸಕರಾಗಿದ್ದ ಎಸ್.ಟಿ. ಸೋಮಶೇಖರ್ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜತೆಗೆ ಕೆ.ಆರ್.ಪುರದ ಕಾಂಗ್ರೆಸ್ ಶಾಸಕರಾಗಿದ್ದ ಬಿ.ಎ.ಬಸವರಾಜು ಅವನನ್ನು ಬಿಡಿಎ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಿಂದ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಸಿದ್ಧತೆ ನಡೆಸಿರುವ ಬಿಜೆಪಿ, ಶಾಸಕರಿಬ್ಬರಿಗೆ ಬಿಡಿಎ ಸದಸ್ಯ ಸ್ಥಾನವನ್ನು ನೀಡಿದೆ ಎಂದು ಹೇಳಲಾಗುತ್ತಿದೆ.