ಸುಳ್ಳು ಹೇಳುವುದನ್ನು ಬಿಟ್ಟು ಜನಪರವಾಗಿ ನಡೆದುಕೊಳ್ಳಿ : ಸಿಎಂಗೆ ಸಿದ್ದು ಟಾಂಗ್
ಬೆಂಗಳೂರು, ಡಿ.6- ವಿಧಾನ ಪರಿಷತ್ ಚುನಾವಣಾ ಕಣದಲ್ಲಿ ಮಾತಿನ ಸಮರ ಜೋರಾಗಿದ್ದು, ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿಯವರು ಮಾಡಿದ ಟೀಕೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ನಮ್ಮ ಜೊತೆ ಬೆಳೆದ ಮನುಷ್ಯ. ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದನೆಗೊಂಡ ಮನುಷ್ಯರಲ್ಲ. ನಿಜ ಮತ್ತು ನೈತಿಕತೆಯ ಆಧಾರದ ಮೇಲೆ ಆಡಳಿತ ನಡೆಸಬಹುದು, ನಮ್ಮ ಸರ್ಕಾರದ ಅಧಿವ ಮುಗಿದಾಗ ಅಭಿವೃದ್ಧಿ ಕೆಲಸಗಳು ಯಾವ ಹಂತದಲ್ಲಿದ್ದವೋ ಅಲ್ಲಿಂದ ಮುಂದಕ್ಕೆ ಕೊಂಡೊಯ್ಯುವ ಕಾಳಜಿಯನ್ನು ಬೊಮ್ಮಾಯಿಯವರು ತೋರಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು.
ಆದರೆ ನಮ್ಮ ನಿರೀಕ್ಷೆಗಳನ್ನೆಲ್ಲ ಸುಳ್ಳು ಮಾಡಿ ಬಿಜೆಪಿಯ ಬಹಳ ದೊಡ್ಡ ಸುಳ್ಳುಗಾರರಾಗಿ ಹೊರ ಹೊಮ್ಮುತ್ತಿರುವುದನ್ನು ನೋಡಿದರೆ, ಕೆಲವೆ ದಿನಗಳಲ್ಲಿ ಬೊಮ್ಮಾಯಿಯವರು ಜನರಿಂದ ಗೇಲಿಗೆ ಒಳಗಾಗುತ್ತಾರೆ ಎನ್ನಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ವರು ಮನೆಗಳನ್ನೇ ನೀಡಿರಲಿಲ್ಲ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಮಾತನಾಡಿದ್ದಾರೆ. 2017ರಲ್ಲಿ ಚುನಾವಣೆಗಳು ಮೂರು ತಿಂಗಳು ಇರುವಾಗ 1 ಲಕ್ಷ ಮನೆಗಳನ್ನು ಘೋಷಿಸಿದರು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರಿಗೆ ಮಾಹಿತಿ ಪಡೆದುಕೊಳ್ಳುವುದು ಕಷ್ಟವಲ್ಲ. ಮಾಹಿತಿ ಇದ್ದರೂ ಸುಳ್ಳು ಹೇಳುವುದು ತಪ್ಪು.
ಬೊಮ್ಮಾಯಿಯವರು ಹೇಳುತ್ತಿರುವ ಒಂದು ಲಕ್ಷ ಮನೆಗಳು ಬೆಂಗಳೂರಿನ ವಸತಿ ಯೋಜನೆಗೆ ಮಾತ್ರ ಸಂಬಂಧಿಸಿದ್ದು. ನಾವು ಅಧಿಕಾರಕ್ಕೆ ಬಂದಿದ್ದರೆ ಆ ಯೋಜನೆಯನ್ನು ಪೂರ್ಣಗೊಳಿಸಿ ಮತ್ತೆ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾವು. ಮುಂದೆ ಅಧಿಕಾರಕ್ಕೆ ಬಂದು ಅದನ್ನು ಮಾಡಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಆ ಯೋಜನೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. 2013 ರಿಂದ 2018 ರ ಮಾರ್ಚ್ ವರೆಗೆ ನಮ್ಮ ಸರ್ಕಾರ 15 ಲಕ್ಷ ಮನೆಗಳನ್ನು 16775.52 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು. ಈ ಮಾಹಿತಿಯನ್ನು ವಸತಿ ಸಚಿವ ಸೋಮಣ್ಣನವರ ಕಛೇರಿಯಿಂದಲೆ ನನಗೆ ಲಿಖಿತವಾಗಿ ಕಳಿಸಿದ್ದಾರೆ. ಮಾಹಿತಿ ಇಲ್ಲದಿದ್ದರೆ ಬೊಮ್ಮಾಯಿಯವರು ಸೋಮಣ್ಣನವರನ್ನು ಕೇಳಿ ಪಡೆದುಕೊಳ್ಳಲಿ ಎಂದು ಲೇವಡಿ ಮಾಡಿದ್ದಾರೆ.
ನಾವು ಹಾಕಿಕೊಂಡಿದ್ದ ಗುರಿ ಮೀರಿ ಸಾಧನೆ ಮಾಡಿದ್ದಾವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಗುತ್ತಿವೆ. ಇದುವರೆಗೂ ಕೂಡ ಪಂಚಾಯಿತಿಗಳಿಗೆ ಮನೆ ನಿರ್ಮಿಸಲು ಹೊಸ ಗುರಿಗಳನ್ನು ನೀಡಿ ಅದನ್ನು ಅನುಷ್ಠಾನ ಮಾಡಿಲ್ಲ ಎಂದಿದ್ದಾರೆ.
ಎರಡನೆಯದಾಗಿ ಮುಖ್ಯಮಂತ್ರಿ ಅವರು ಕಲ್ಯಾಣ ಕರ್ನಾಟಕ ಬೀದರ್ನ ಬಸವಣ್ಣನವರ ಕರ್ಮಭೂಮಿಯಲ್ಲಿ ನಿಂತು ಸುಳ್ಳು ಹೇಳಿ ಬಸವತತ್ವಕ್ಕೆ ಅಪಚಾರ ಮಾಡಿದ್ದಾರೆ. ಕಾಂಗ್ರೆಸ್ನವರು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಗಳಲ್ಲಿ ಖಾಲಿ ಇದ್ದ ಸರ್ಕಾರಿ ಹುದ್ದಾಗಳನ್ನು ತುಂಬಿಲ್ಲ ಎಂದಿದ್ದಾರೆ.
ನಮ್ಮ ಕಾಂಗ್ರೆಸ್ ಸರ್ಕಾರದ ಅಧಿವಯಲ್ಲಿ 32 ಸಾವಿರ ಸರ್ಕಾರಿ ಹುದ್ದಾಗಳನ್ನು ಭರ್ತಿ ಮಾಡಿದ್ದೇವೆ. ಇದರಲ್ಲಿ ಬಿಜೆಪಿಯದ್ದೇ ಇನ್ನೂ ಶೂನ್ಯ ಸಾಧನೆ ಎಂದು ಹೇಳಿದರು. ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಪಂಚಾಯಿತಿಗಳ ಕಡೆಗೆ ತಿರುಗಿ ನೋಡಿರಲಿಲ್ಲ ಎಂದಿದ್ದಾರೆ. ನಾನು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದ ಅಧಿವಯಲ್ಲಿ ಗ್ರಾಮ ವಿಕಾಸ ಮತ್ತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಜಾರಿಗೆ ತಂದೆವು.
ಆ ಯೋಜನೆಯಡಿ 1750 ಕೋಟಿ ರೂಪಾಯಿಗಳನ್ನು ನೀಡಿ 2000 ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದ್ದಾವು. ಪ್ರತಿ ಗ್ರಾಮಕ್ಕೆ ತಲಾ ಒಂದೊಂದು ಕೋಟಿ ರೂ.ಗಳನ್ನು ನೀಡಿದ್ದಾವು. ಈ ಬಿಜೆಪಿಯವರು ಬಂದ ಮೇಲೆ ಅದಕ್ಕೂ ಕಲ್ಲು ಹಾಕಿ ಯೋಜನೆ ನಿಲ್ಲಿಸಿದರು ಎಂದು ಕಿಡಿಕಾರಿದ್ದಾರೆ.
ಈಗ ಅಮೃತ ಯೋಜನೆಯಡಿ ಕೆಲವು ಗ್ರಾಮಗಳಿಗೆ 25 ಲಕ್ಷ ರೂ. ನೀಡುತ್ತೇವೆಂದು ಬೊಮ್ಮಾಯಿವರು ಹೇಳುತ್ತಾರೆ. 25 ಲಕ್ಷ ರೂಪಾಯಿಗಳಲ್ಲಿ ಏನು ಮಾಡುತ್ತಾರೆ. ಈ ಸರ್ಕಾರದಲ್ಲಿ ಲಂಚಕ್ಕಾಗಿ ಶೇ.40-52 ಹೋಗುತ್ತಿದೆ. ಜಿಎಸ್ಟಿಗೆ ಶೇ.18-28 ಹೋಗುತ್ತದೆ. ಅಲ್ಲಿಗೆ ಶೇ 70 ರಷ್ಟು ಕೊಚ್ಚಿ ಕೊಂಡು ಹೋದಂತಾಯಿತು. ಗುತ್ತಿಗೆದಾರನಿಗೆ 10 ಪರ್ಸೆಂಟ್ ಲಾಭ ಬೇಕು. ಉಳಿದದ್ದು 20 ಪರ್ಸೆಂಟ್ ಮಾತ್ರ. ಬೊಮ್ಮಾಯಿಯವರು 25 ಲಕ್ಷ ನೀಡುತ್ತೇನೆ ಎಂದರೆ ಗ್ರಾಮಗಳ ಕಾಮಗಾರಿಗಳಿಗೆ ಸಿಗುವುದು ಕೇವಲ 5 ಲಕ್ಷ ರೂ. ಮಾತ್ರ. ಅಮೃತ ಯೋಜನೆ ಬಿಜೆಪಿಯವರ ಜೇಬಿಗೆ ಮಾತ್ರ ಅಮೃತವಾಗಿದೆ, ಜನರ ಪಾಲಿಗೆ ವಿಷವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಇದ್ದಾಗ ಗ್ರಾಮೀಣ ಸುಮಾರ್ಗ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಪ್ರಾರಂಭಿಸಿದ್ದಾವು. ಅವನ್ನೂ ನಿಲ್ಲಿಸಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕಳೆದ ವರ್ಷ ಗ್ರಾಮೀಣ ರಸ್ತೆಗಳಿಗೆಂದು 1350 ಕೋಟಿ ನೀಡುವುದಾಗಿ ಆದೇಶ ಹೊರಡಿಸಿ ಕೆಲಸ ಮಾಡಿಸಿದರು. ಆದರೆ ಇದುವರೆಗೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಕೆಲಸ ಮಾಡಿದ ಗುತ್ತಿಗೆದಾರ ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಪ್ರಧಾನಿ ಅವರು ಪ್ರಧಾನಿಯಾದ ಮೇಲೆ ಪಂಚಾಯತ್ಗಳಿಗೆ ಹಣ ಬರುತ್ತಿದೆ ಎಂದು ಸುಳ್ಳು ಹೇಳಿದ್ದಾರೆ. ಹಿಂದಿನ ಯುಪಿಎ ಸರ್ಕಾದ ಮನ್ರೆಗಾ ಯೋಜನೆ ಆರಂಭಿಸಿದಾಗಲೇ ಹಣ ಬಿಡುಗಡೆಯಾಗಲಾರಂಭಿಸಿತ್ತು. ಬೊಮ್ಮಾಯಿಯವರು ಸುಳ್ಳು ಹೇಳಿಕೊಂಡು ಓಡಾಡುವ ಬದಲು ಡೆಲ್ಲಿಗೆ ಹೋಗಿ ನರೇಗಾ ಯೋಜನೆಗೆ ಬೇಡಿಕೆ ಆಧಾರಿತವಾಗಿ ಹೊಸ ಟಾರ್ಗೆಟ್ ತರಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನು ಮಾಡದೆ ರಾಜ್ಯದ ಜನರಿಗೆ ಟೋಪಿ ಹಾಕಿಕೊಂಡು ಓಡಾಡಿದರೆ ರಾಜ್ಯದ ಜನರಿಗೇನು ಲಾಭ. ಮೋದಿಯವರು ಸಂಸದರ ಆದರ್ಶ ಗ್ರಾಮ ಎಂದು ಯೋಜನೆ ಘೋಷಿಸಿದರು. ಅದೂ ಸಹ ಇನ್ನೂ ಪೇಪರ್ ಮೇಲೆ ಇದೆ. ಬೊಮ್ಮಾಯಿಯವರು ಇನ್ನೂ ಒಂದು ಮಾತನ್ನು ಹೇಳಿದ್ದಾರೆ. ಕಾಂಗ್ರೆಸ್ ವಯಸ್ಸಾದ ಪಕ್ಷ ಅದನ್ನು ವಿಸರ್ಜಿಸಬೇಕು ಅಂದಿದ್ದಾರೆ. ಪಕ್ಷಗಳು ಸಿಂಬಲ್ ಮೇಲೆ ಮಾತ್ರ ನಿಂತಿರುವುದಿಲ್ಲ. ಸಿದ್ಧಾಂತಗಳ ಮೇಲೆ ನಿಂತಿರುತ್ತವೆ. ಬಿಜೆಪಿಯವರ ಸಿದ್ಧಾಂತ ಯಾವುದು ? ಮನುವಾದ ಅಲ್ಲವೆ ? ಎಂದು ತಿರುಗೇಟು ನೀಡಿದ್ದಾರೆ.
ಈ ಕಾಲಕ್ಕೆ ಹೊಂದಿಕೆಯಾಗದ ಪಳಿಯುಳಿಕೆಯಂಥ ಸಿದ್ಧಾಂತವನ್ನು ಹೊತ್ತುಕೊಂಡು ಓಡಾಡುತ್ತಿರುವ ಬಿಜೆಪಿಯನ್ನು ವಿಸರ್ಜನೆ ಮಾಡಬೇಕೆ ಹೊರತು ಯುಗಧರ್ಮದ ಜೊತೆ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವನ್ನಲ್ಲ ಎಂದಿದ್ದಾರೆ.
ನೀವು ಕೂಡ ಮನುಷ್ಯ ವಿರೋಯಾದ ಮನು ಸಿದ್ಧಾಂತವನ್ನು ತೊರೆದು ಹೊರ ಬನ್ನಿ ಎಂದು ತಿಳಿಸಬಯಸುತ್ತೇನೆ. ಕನಿಷ್ಟ ಪಕ್ಷ ಸುಳ್ಳು ಹೇಳುವುದನ್ನು ನಿಲ್ಲಿಸಿ. ಕಳಬೇಡ, ಕೊಲಬೇಡ, ಹುಸಿಯ ನಡಿಯಲು ಬೇಡ ಎಂದ ಬಸವಣ್ಣನವರ ತತ್ವವನ್ನು ಹಾಗೂ ಬಾಬಾ ಸಾಹೇಬರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ