ಸೂರಜ್ ರೇವಣ್ಣ ವಿರುದ್ಧದ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸೂರಜ್ ರೇವಣ್ಣ ವಿರುದ್ಧದ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು,ಡಿ.6- ಹಾಸನ ವಿಧಾನ ಪರಿಷತ್ ಚುನಾವಣಾ ತಡೆಗೆ ನಕಾರ ವ್ಯಕ್ತಪಡಿಸಿರುವ ಹೈಕೋರ್ಟ್ ಸೂರಜ್ ರೇವಣ್ಣ ಅವರ ವಿರುದ್ಧದ ರಿಟ್ ಅರ್ಜಿಯನ್ನು ಇಂದು ವಜಾಗೊಳಿಸಿದೆ.

ಸೂರಜ್ ರೇವಣ್ಣ ಅವರು ಮದುವೆಯಾಗಿದ್ದರೂ ಪ್ರಮಾಣಪತ್ರದಲ್ಲಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಅವರ ನಾಮಪತ್ರವನ್ನು ತಿರಸ್ಕಾರ ಮಾಡಬೇಕೆಂದು ಕೋರಿ ಕುಂದೂರು ಗ್ರಾಪಂ ಸದಸ್ಯ ಕೆ.ಎಲ್.ಹರೀಶ್ ಅವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ.

ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ. ಆಕ್ಷೇಪವಿದ್ದರೆ ತಾವು ಚುನಾವಣಾ ತಕರಾರು ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.

ಚುನಾವಣೆ ಘೋಷಣೆಯಾದ ಮೇಲೆ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ತಮ್ಮ ತಕರಾರು ಇದ್ದರೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಸೂರಜ್ ರೇವಣ್ಣ ಅವರು ಮದುವೆಯಾಗಿದ್ದರೂ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಬಗ್ಗೆ ವಿವರಗಳನ್ನು ನಮೂದಿಸಿಲ್ಲ ಮತ್ತು ಕೆಲವು ಆಸ್ತಿ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಹರೀಶ್ ಅವರು ಆಕ್ಷೇಪ ವ್ಯಕ್ತಪಡಿಸಿ ರಿಟ್ ಅರ್ಜಿ ಸಲ್ಲಿಸಿ ನಾಮಪತ್ರ ತಿರಸ್ಕಾರ ಮಾಡಬಬೇಕೆಂದು ಕೋರ್ಟ್‍ಗೆ ಮನವಿ ಮಾಡಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯ, ಚುನಾವಣೆ ತಡೆಗೆ ನಕಾರ ವ್ಯಕ್ತಪಡಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.