ಯಾವುದೇ ಒತ್ತಡಕ್ಕೆ ಮಣಿಯದೆ ರಾಜಕಾಲುವೆ ತೆರವು : ಸಿಎಂ ಬೊಮ್ಮಾಯಿ

ಯಾವುದೇ ಒತ್ತಡಕ್ಕೆ ಮಣಿಯದೆ ರಾಜಕಾಲುವೆ ತೆರವು : ಸಿಎಂ ಬೊಮ್ಮಾಯಿ

ಬೆಳಗಾವಿ, ಡಿ.23- ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವಿಗೆ ಯಾವುದೇ ಒತ್ತಡಕ್ಕೆ ಮಣಿಯದೆ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 382 ಎಕರೆ 27 ಗುಂಟೆ ಜಮೀನು ಒತ್ತುವರಿಯಾಗಿದೆ.

ಈ ಸಂಬಂಧ 2626 ಒತ್ತುವರಿಗಳನ್ನು ಗುರುತಿಸಲಾಗಿದೆ. ಈಗಾಗಲೇ 1912 ಒತ್ತುವರಿ ತೆರವುಗೊಳಿಸಲಾಗಿದೆ.ಒಟ್ಟು 714 ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಬೇಕಿದೆ. ಈ ಸಂಬಂಧಪಟ್ಟಂತೆ ಭೂಮಾಪನ ಕಾರ್ಯ ಪ್ರಗತಿಯಲ್ಲಿದೆ. ಒತ್ತುವರಿ ಮಾಡಿದ ಒಟ್ಟು 98 ಮಾಲೀಕರ ವಿರುದ್ಧ ಕರ್ನಾಟಕ ರಾಜ್ಯ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಬೊಮ್ಮಯಿ ನುಡಿದರು.

ನಾವು ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಒತ್ತುವರಿ ತೆರವು ಮಾಡುತ್ತೇವೆ. ಪ್ರಬಾವಿಗಳು ತಡೆಯಾಜ್ಜಾ ತರಲು ಅವಕಾಶ ನೀಡದಂತೆ ಕ್ರಮ ವಹಿಸಲು ಕಾನೂನು ತಂಡಕ್ಕೆ ಸೂಚನೆ ನೀಡಲಾಗಿದೆ. ಇನ್ನೂ ಮುಂದೆ ವಕೀಲರು ಎಷ್ಟು ಪ್ರಕರಣಗಳಲ್ಲಿ ತಡೆಯಾಜ್ಜಾ ತೆರವು ಮಾಡುತ್ತಾರೆ ಎಂಬ ಆಧಾರದ ಮೇಲೆ ವಕೀಲರ ಸೇವೆಯನ್ನು ಮುಂದುವರೆಸುವ ಕುರಿತು ಪರಿಶೀಲಿಸುವುದಾಗಿ ಹೇಳಿದ್ದೇವೆ.

ಸದಸ್ಯ ಪಿ.ಆರ್.ರಮೇಶ್ ಅವರು ಪ್ರಶ್ನೆ ಕೇಳಿ, 2003ರಲ್ಲಿ ನಾನು ಮೇಯರ್ ಆಗಿದ್ದಾಗ ಬೆಂಗಳೂರಿನಲ್ಲಿ ರಾಜ ಕಾಲುವೆಗಳ ಮರು ವಿನ್ಯಾಸ ಮಾಡಲಾಗಿತ್ತು. ರಾಜಕಾಲುವೆ ಹೂಳು ತೆಗೆಯುವುದರಲ್ಲಿ ಬಹಳಷ್ಟು ಅವ್ಯವಹಾರ ನಡೆದಿದೆ. 2013ರಿಂದ ಈವರೆಗೂ ಸುಮಾರು 2 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಒತ್ತುವರಿಯೂ ಆಗಿದೆ ಎಂದು ಆರೋಪಿಸಿದರು.

ಉತ್ತರ ನೀಡಿದ ಮುಖ್ಯಮಂತ್ರಿಯವರು, ಬೆಂಗಳೂರಿನಲ್ಲಿ ಹಲವಾರು ಸವಾಲುಗಳಂತೆ ರಾಜಕಾಲುವೆಯೂ ಒಂದು ಸವಾಲು. ತಾಜ್ಯ ಸಂಗ್ರಹವೂ ಮತ್ತೊಂದು ಸವಾಲುಲಾಗಿದೆ. ಬೆಂಗಳೂರಿನಲ್ಲಿ 842 ಕಿ.ಮೀ. ಪ್ರಾಥಮಿಕ ಮತ್ತು ದ್ವಿತೀಯ ರಾಜಕಾಲುವೆಯಿದೆ. ಅದರಲ್ಲಿ 428 ಕಿ.ಮೀ. ಅಭಿವೃದ್ಧಿಯಾಗಿದೆ. 440 ಕಿ.ಮೀ. ಉದ್ದಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಬಾಕಿ ಇರುವ ಕಾಲುವೆಗೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.

2016ರಿಂದ 313 ಕಿ.ಮೀ. ರಾಜಕಾಲುವೆ ನಿರ್ಮಾಣ ಮಾಡಿದ್ದೇವೆ. ಕಾಮಗಾರಿಗಾಗಿ 2 ಸಾವಿರ ಕೋಟಿ ಹಣ ನಿಗದಿಯಾಗಿತ್ತು, 1600 ಕೋಟಿ ರೂ. ಖರ್ಚು ಮಾಡಲಾಗಿದೆ. ಇತ್ತೀಚೆಗೆ ಸುರಿದ ಮಳೆಯ ಅನಾಹುತಗಳನ್ನು ಗಮನಿಸಿ ರಾಜಕಾಲುವೆ ಮರು ವಿನ್ಯಾಸಕ್ಕೆ ಸೂಚನೆ ನೀಡಲಾಗಿದೆ. ಹೊಸದಾಗಿ 1200 ಕೋಟಿ ರೂ. ಖರ್ಚು ಮಾಡಿ 128 ಕಿ.ಮೀ. ರಾಜಕಾಲುವೆ ಅಭಿವೃದ್ಧಿಪಡಿಸಲಾಗುವುದು. ಒತ್ತುವರಿ ತೆರವು, ಬಾಟಲ್ ನೆಕ್ ತೆಗೆಯುವುದು ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡು ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲಾಗುವುದು ಎಂದರು.