ಇಡೀ ಜೆಡಿಎಸ್ ಪಕ್ಷವನ್ನೇ ಮುಚ್ಚುವ ಸುಳಿವು ನೀಡಿದ ಕುಮಾರಸ್ವಾಮಿ

ಮೈಸೂರು / ರಾಮನಗರ, ಡಿ 6: "ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡಲಿದೆ. ಎಲ್ಲಾ ಮೂರು ಪಕ್ಷಗಳು ತಮ್ಮತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದು ಸಹಜ. ಹಾಗಾಗಿ, ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವ ಪ್ರಶ್ನೆ ಎದುರಾಗುವುದಿಲ್ಲ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
"ಯಡಿಯೂರಪ್ಪನವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ.
"ಮೈತ್ರಿ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಹೊರಗೆ ಮುಕ್ತವಾಗಿಯೇ ಮಾತನಾಡಿದ್ದಾರೆ. ಅಲ್ಲದೆ, ಸ್ವತಃ ಅವರು ನನಗೆ ಮೊಬೈಲ್ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಎಲ್ಲಿ ಜೆಡಿಎಸ್ ಅಭ್ಯರ್ಥಿಗಳಲ್ಲವೋ ಅಂತಹ ಕ್ಷೇತ್ರಗಳಲ್ಲಿ ಜೆಡಿಎಸ್ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ" ಎಂದು ಎಚ್‌ಡಿಕೆ ಹೇಳಿದ್ದಾರೆ. "ನಮ್ಮ ಗುರಿ 2023ರ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದೇ ಆಗಿದೆ.
ರಾಜ್ಯವ್ಯಾಪಿ ನಮ್ಮ ಪಕ್ಷಕ್ಕೆ ನೆಲೆ ಇರುವುದರಿಂದಲೇ ಬಿಜೆಪಿ ನಾಯಕರು ನಮ್ಮ ಬೆಂಬಲ ಕೇಳಿದ್ದಾರೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಸಾಧ್ಯವಾಗದೇ ಇದ್ದರೆ, ಪಕ್ಷಕ್ಕೆ ಬೀಗು ಹಾಕುವ ಮಾತನ್ನು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಆಡಿದ್ದಾರೆ.
ವೈಯಕ್ತಿಕ ಟೀಕೆಗಳು ರಾಜ್ಯದಲ್ಲಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.
"ವೈಯಕ್ತಿಕ ಟೀಕೆಗಳು ರಾಜ್ಯದಲ್ಲಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಾನು ಎರಡ್ಮೂರು ಸಂದರ್ಭದಲ್ಲಿ ಟೀಕೆ ಮಾಡಿದ್ದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಹಾಗಾಗಿ, ನಾನು ನೀಡುತ್ತಿರುವ ಹೇಳಿಕೆ ಮತ್ತು ನನ್ನ ರಾಜಕೀಯ ಶೈಲಿಯನ್ನು ಬದಲಾವಣೆ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಯಾವುದೇ ನಾಯಕರ ವಿರುದ್ದ ವೈಯಕ್ತಿಕ ಟೀಕೆಯನ್ನು ನಾನು ಮಾಡುವುದಿಲ್ಲ"ಎಂದು ಕುಮಾರಸ್ವಾಮಿ ಶಪಥ ಮಾಡಿದ್ದಾರೆ.
ಸ್ಥಳೀಯ, ರಾಜ್ಯಮಟ್ಟದಲ್ಲಿ ನಮ್ಮೊಂದಿಗೆ ಆ ಪಕ್ಷ ಗೌರವಯುತವಾಗಿ ನಡೆದುಕೊಂಡಿಲ್ಲ.
"2023ರ ಚುನಾವಣೆ ನನ್ನ ಗುರಿ, 123 ಸ್ಥಾನ ಗೆಲ್ಲುವುದು. ನನ್ನ ಕಾರ್ಯಕ್ರಮಗಳನ್ನು ಜನರ ಮುಂದೆ ತಲುಪಿಸುವುದು ನನ್ನ ಈಗಿರುವ ಉದ್ದೇಶ. ಅಭಿವೃದ್ದಿ ಆಧಾರದ ಮೇಲೆ, ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಹೋಗುತ್ತೇವೆ. ಮತದಾರರು ಮತ್ತು ಕಾರ್ಯಕರ್ತರೇ ನಮಗೆ ಶಕ್ತಿ. ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲ ಕೇಳಿಲ್ಲ. ಸ್ಥಳೀಯ, ರಾಜ್ಯಮಟ್ಟದಲ್ಲಿ ನಮ್ಮೊಂದಿಗೆ ಆ ಪಕ್ಷ ಗೌರವಯುತವಾಗಿ ನಡೆದುಕೊಂಡಿಲ್ಲ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಸಣ್ಣಪುಟ್ಟ ಸಮಸ್ಯೆಗಳಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ಸರಿಪಡಿಸಿ 2023ರ ಚುನಾವಣೆಗೆ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಕುಮಾರಸ್ವಾಮಿ ಹೇಳಿದರು.
ಬಿಡದಿಯಲ್ಲಿ ನಡೆದ ʼಜನತಾಪರ್ವ 1.Oʼ ಕಾರ್ಯಾಗಾರ.
"ಜೆಡಿಎಸ್ ಪಕ್ಷ ಬಿಜೆಪಿಯ ಬಿಟೀಂ ಎಂದು ಕಾಂಗ್ರೆಸ್ಸಿನವರು ಹೇಳುತ್ತಿದ್ದಾರೆ, ಇದು ಮುಂದಿನ ಚುನಾವಣೆಯಲ್ಲಿ ನಮಗೆ ಸಹಕಾರಿಯಾಗಲಿದೆ. ಬಿಡದಿಯಲ್ಲಿ ನಡೆದ ʼಜನತಾಪರ್ವ 1.Oʼ, ಮತ್ತು ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ʼಜನತಾ ಸಂಗಮʼ ಕಾರ್ಯಾಗಾರಗಳಲ್ಲಿ ನೀಡಲಾದ ಸೂಚನೆ- ನಿರ್ದೇಶನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಪರಿಷತ್ ಚುನಾವಣೆ ಗೆಲ್ಲಲು ಪಕ್ಷ ರೂಪಿಸಿರುವ ಈ ವ್ಯವಸ್ಥೆಯನ್ನು 2023ರ ವಿಧಾನಸಭೆ ಚುನಾವಣೆಗೂ ರಾಜ್ಯವ್ಯಾಪಿ ಅನ್ವಯ ಮಾಡಲಾಗುವುದು" ಎಂದು ಕುಮಾರಸ್ವಾಮಿ ಹೇಳಿದರು.
ಜಿ.ಟಿ.ದೇವೇಗೌಡರು ತಮ್ಮದೇ ಆದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.ಕಾಂಗ್ರೆಸ್ಸಿನವರು ಹೇಳುತ್ತಿರುವ ಹೇಳಿಕೆಯಿಂದ ಜೆಡಿಎಸ್ಸಿಗೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಅನುಕೂಲವಾಗಲಿದೆ. 123ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರುವ ಯೋಜನೆ ಹಾಕಿಕೊಳ್ಳಲಾಗಿದೆ. ಇದು ಒಂದು ವೇಳೆ ಸಾಧ್ಯವಾಗದೇ ಇದ್ದರೆ, ಜೆಡಿಎಸ್ ಪಕ್ಷವನ್ನೇ ಮುಚ್ಚುವ ನಿರ್ಧಾರ ಮಾಡಬೇಕಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. "ಜಿ.ಟಿ.ದೇವೇಗೌಡರು ತಮ್ಮದೇ ಆದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಅವರು ಈ ಚುನಾವಣೆಯಲ್ಲೂ ತಮ್ಮದೇ ಲೆಕ್ಕಾಚಾರದಲ್ಲಿ ಇರಬಹುದು. ಅದರ ಬಗ್ಗೆ ಚರ್ಚೆ ಮಾಡುವುದು ಅನಗತ್ಯ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.