ಆಸ್ಟ್ರೇಲಿಯಾದಲ್ಲಿ ಶಾರ್ಕ್‌ ದಾಳಿಗೆ ಸರ್ಫರ್‌ ಬಲಿ

ಆಸ್ಟ್ರೇಲಿಯಾದಲ್ಲಿ ಶಾರ್ಕ್‌ ದಾಳಿಗೆ ಸರ್ಫರ್‌ ಬಲಿ

ಸಿಡ್ನಿ: ಶಾರ್ಕ್‌ ನಡೆಸಿದ ದಾಳಿಗೆ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಸರ್ಫರ್‌ವೊಬ್ಬರು ಭಾನುವಾರ ಸಾವಿಗೀಡಾಗಿದ್ದಾರೆ.

ನ್ಯೂ ಸೌಥ್‌ ವೇಲ್ಸ್‌ನ ಎಮೆರಾಲ್ಡ್‌ ಬೀಚ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸರ್ಫರ್‌ 20 ವರ್ಷದ ಯುವಕ ಎಂದು ಗುರುತಿಸಲಾಗಿದೆ.

ಶಾರ್ಕ್ ದಾಳಿಗೆ ಒಳಗಾದ ಬಳಿಕ ಯುವಕನನ್ನು ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ನಡೆಸಿದ ಪ್ರಯತ್ನಗಳು ಸಫಲವಾಗಲಿಲ್ಲ. ಹೆಲಿಕಾಪ್ಟರ್‌ನಲ್ಲಿ ವೈದ್ಯಕೀಯ ತಂಡ ಸಹ ಧಾವಿಸಿತ್ತು ಆದರೆ. ಸರ್ಫರ್‌ ತೀವ್ರ ಗಾಯಗೊಂಡಿದ್ದರಿಂದ ಯುವಕನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನ್ಯೂ ಸೌಥ್‌ ವೇಲ್ಸ್‌ನ ಆಂಬುಲೆನ್ಸ್‌ ಇನ್‌ಸ್ಪೆಕ್ಟರ್‌ ಕ್ರಿಸ್‌ ವಿಲ್ಸನ್‌ ತಿಳಿಸಿದ್ದಾರೆ.

ಈ ಘಟನೆ ಬಳಿಕ, ಬೀಚ್‌ಗೆ ಜನರು ತೆರಳುವುದನ್ನು ನಿರ್ಬಂಧಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಈ ವರ್ಷದಲ್ಲಿ ಇದು ಎರಡನೇ ಶಾರ್ಕ್‌ ದಾಳಿಯಾಗಿದೆ.