ಅನ್ಸಾರಿ, ಶ್ರೀನಾಥ ಆಪ್ತರು ರೆಡ್ಡಿ ಪಕ್ಷ ಸೇರ್ಪಡೆ; ಕಾಂಗ್ರೆಸ್-ಬಿಜೆಪಿ ಪಕ್ಷಗಳಿಗೆ ಭಾರಿ ಹಿನ್ನಡೆ

ಗಂಗಾವತಿ: ನಿತ್ಯವೂ ಗಾಲಿ ಜನಾರ್ದನರೆಡ್ಡಿ ಪಕ್ಷಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಿಜೆಪಿ ನಂತರ ಕಾಂಗ್ರೆಸ್ ಪಕ್ಷದ ಹಿರಿಯರ ಗುಂಪೊಂದು ಜ. 29ರ ರವಿವಾರ ಸಂಜೆ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯನ್ನು ಸೇರ್ಪಡೆಯಾಗಿದ್ದಾರೆ.
ವಿಶೇಷವಾಗಿ ಮಾಜಿ ಸಚಿವ ಮುಂದಿನ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳೆಂದು ಬಿಂಬಿಸಿಕೊಳ್ಳುತ್ತಿರುವ ಇಕ್ಬಾಲ್ ಅನ್ಸಾರಿ, ಎಂ. ಮಲ್ಲಿಕಾರ್ಜುನ ನಾಗಪ್ಪ, ಎಚ್.ಆರ್. ಶ್ರೀನಾಥ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖರು ಗಾಲಿ ರೆಡ್ಡಿ ಬಣಕ್ಕೆ ಜಂಪ್ ಆಗಿದ್ದಾರೆ. ಇದುವರೆಗೂ ಬಿಜೆಪಿಯ ಎರಡನೇ ಹಂತದ ನಾಯಕರು, ಚಾಲಕರು ಮತ್ತು ಕೆಲ ಕನ್ನಡ ಮತ್ತು ಇತರೆ ಸಂಘಟನೆಗಳ ಮುಖಂಡರು ರೆಡ್ಡಿ ಪಕ್ಷ ಸೇರ್ಪಡೆಯಾಗುತ್ತಿದ್ದರು.
ಇದೀಗ ಕಾಂಗ್ರೆಸ್ ಪಕ್ಷದಿಂದ ನಗರಸಭೆ, ತಾ.ಪಂ., ಜಿ.ಪಂ ಮತ್ತು ಎಪಿಎಂಸಿಗೆ ಸ್ಪರ್ಧೆ ಮಾಡಿದ ಪ್ರಮುಖ ಮುಖಂಡರು ಗಾಲಿ ಕಡೆ ಹೋಗುವ ಮೂಲಕ ಕಾಂಗ್ರೆಸ್ ಗೆ ಭಾರಿ ಪೆಟ್ಟು ನೀಡಿದಂತಾಗಿದೆ.
ನಗರಸಭೆ ಮಾಜಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ನಾಯಕ ಅಮರ ಜ್ಯೋತಿ ನರಸಪ್ಪ ನೇತೃತ್ವದಲ್ಲಿ ನೂರಕ್ಕೂ ಅಧಿಕ ಮುಖಂಡರು ರವಿವಾರ ಕೆಆರ್ ಪಿಪಿ ಪಕ್ಷ ಸೇರ್ಪಡೆಯಾದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾದವರ ವಿವರ ಹೀಗಿದೆ:
ನಗರಸಭೆಯ ಮಾಜಿ ಅಧ್ಯಕ್ಷ ಪಾಪಣ್ಣ, ನಾಯಕ, ಮಾಜಿ ಸದಸ್ಯರಾದ ಪುತ್ತೂರು ಶ್ರೀನಿವಾಸ್, ಈ. ರಾಮಕೃಷ್ಣ, ಸೈಯದ್ ಇಬ್ರಾಹಿಂ, ಬಿ.ನಾಗರಾಜ, ಬಲಿಜ ಸಮಾಜದ ಅಧ್ಯಕ್ಷ ಟಿ.ಜಿ.ಬಾಬು ಆನೆಗುಂದಿ, ಮಲ್ಲಪ್ಪ ಸಜ್ಜನ್, ಮಹಮ್ಮದ್ ಚಾವೂಸ್, ಶಿವಣ್ಣ, ಮಂಜುನಾಥ ವಲ್ಕಂದಿನ್ನಿ, ವಿಶ್ವಕರ್ಮ ಸಮಾಜದ ವಿಜಯಕುಮಾರ್, ಸೈಯದ್ ಅಲಿ, ಉಪ್ಪಾರ ಸಮಾಜದ ಮುಕ್ಕಣ್ಣ, ಕೆ.ಯಂಕೋಬಿ, ಚಳ್ಳಾರಿ ಕೃಷ್ಣ, ನಾರಾಯಣಪ್ಪ ಎಮ್ಮಿ, ಶ್ರೀಧರ ಇಂಗಳಗಿ, ನಂದಾಪುರ್ ಮಲ್ಲಿಕಾರ್ಜುನ, ಗೋವಿಂದಪ್ಪ ಹುಲಗಿ, ಗೋವಿಂದರಾಜ್, ರಾಘವೇಂದ್ರ ಎಫ್ ಚಲುವಾದಿ ಹೀರೆಜಂತಕಲ್ ಹಾಗೂ ಜೊತೆಗೆ ಇನ್ನಿತರರು ಪಕ್ಷ ಮುಖಂಡರು ಪಕ್ಷ ಸೇರ್ಪಡೆಗೊಂಡರು.