ರೋಹಿತ್, ಕೊಹ್ಲಿಯಂತೆ ಆತನಿಗೆ ಮೂರು ಮಾದರಿಯಲ್ಲಿ ಆಡುವ ಸಾಮರ್ಥ್ಯವಿದೆ ಎಂದ ಮಾಜಿ ಕ್ರಿಕೆಟಿಗ

ರೋಹಿತ್, ಕೊಹ್ಲಿಯಂತೆ ಆತನಿಗೆ ಮೂರು ಮಾದರಿಯಲ್ಲಿ ಆಡುವ ಸಾಮರ್ಥ್ಯವಿದೆ ಎಂದ ಮಾಜಿ ಕ್ರಿಕೆಟಿಗ

ಫೆಬ್ರವರಿ 9ರಿಂದ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಸರಣಿ ಆರಂಭವಾಗಲಿದೆ. ಈ ಸರಣಿಯ ಮೊದಲ ಎರಡು ಪಂದ್ಯಗಳಿಗಾಗಿ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್‌ರನ್ನು ಆಯ್ಕೆ ಮಾಡಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಈ ನಿರ್ಧಾರವನ್ನು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಸ್ವಾಗತಿಸಿದ್ದಾರೆ. ಚೇತನ್ ಶರ್ಮಾ ನೇತೃತ್ವದ ಹೊಸ ಆಯ್ಕೆ ಸಮಿತಿಯು ಟಿ20 ಮಾದರಿಯಲ್ಲಿ ಉತ್ತಮ ರನ್ ಗಳಿಸುತ್ತಿರುವ ಸೂರ್ಯಕುಮಾರ್ ಅವರನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆ ಮಾಡಲಾಗಿದ್ದು, ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಬದಲಿಗೆ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟಿ20 ಮಾದರಿಯಲ್ಲಿ ನಂಬರ್ 1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ ಆಡಲು ಸಜ್ಜಾಗಿದ್ದಾರೆ. ಟಿ20 ಮತ್ತು ಏಕದಿನ ಮಾದರಿಯಲ್ಲಿ ಹಲವು ಪಂದ್ಯಗಳನ್ನಾಡಿದರೂ, ಸೂರ್ಯಕುಮಾರ್ ಇನ್ನೂ ಟೆಸ್ಟ್ ತಂಡದಲ್ಲಿ ಪದಾರ್ಪಣೆ ಮಾಡಿರಲಿಲ್ಲ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಶತಕ ಗಳಿಸಿದ ನಂತರ ಆಯ್ಕದಾರರು ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಒಲವು ತೋರಿದ್ದಾರೆ.

ಮೂರು ಮಾದರಿಯಲ್ಲಿ ಆಡುವ ಸಾಮರ್ಥ್ಯ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತೆ ಸೂರ್ಯಕುಮಾರ್ ಯಾದವ್ ಕೂಡ ಮೂರು ಮಾದರಿಯಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮೊಹಮ್ಮದ್ ಅಜರುದ್ದೀನ್ ನಂಬಿದ್ದಾರೆ.

ಸೂರ್ಯಕುಮಾರ್ ಈಗಾಗಲೇ ರಣಜಿ ಟ್ರೋಫಿಯಲ್ಲಿ ಮಿಂಚಿದ್ದಾರೆ. ಸುದೀರ್ಘ ಅವಧಿಯವರೆಗೆ ಟೆಸ್ಟ್ ಆಡಿದ ಅನುಭವ ಹೊಂದಿರುವ ಅವರು, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಇದುವರೆಗೂ 17 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 45 ಅಂತಾರಾಷ್ಟ್ರೀಯ ಟಿ20 ಪಂದ್ಯಗಳ್ನು ಆಡಿದ್ದರೂ, ಒಂದೇ ಒಂದು ಟೆಸ್ಟ್ ಪಂದ್ಯವನ್ನು ಕೂಡ ಆಡಿಲ್ಲ.

ಫಾರ್ಮ್‌ನಲ್ಲಿದ್ದಾಗ ಬೆಂಚ್ ಕಾಯಿಸಬೇಡಿ

"ಆಟಗಾರರು ಫಾರ್ಮ್‌ನಲ್ಲಿದ್ದಾಗ ಅವರನ್ನು ಬೆಂಚ್‌ ಕಾಯುವಂತೆ ಮಾಡುವುದು ಸರಿಯಲ್ಲ. ಸೂರ್ಯಕುಮಾರ್ ಯಾದವ್ 3 ಮಾದರಿಯಲ್ಲಿ ಭಾರತ ತಂಡಕ್ಕಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತೆ ಅವರು ಕೂಡ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಬಹುದು ಎಂದು ನಾನು ನಂಬುತ್ತೇನೆ. ಬಹಳ ಸಮಯದ ನಂತರ ಭಾರತಕ್ಕೆ ಅಂತಹ ಬ್ಯಾಟ್ಸ್‌ಮನ್ ಸಿಕ್ಕಿದ್ದಾರೆ" ಎಂದು ಅಜರುದ್ದೀನ್ ಪಿಟಿಐಗೆ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದಿರುವ ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು ಎಂದು ಅಜರುದ್ದೀನ್ ಸಲಹೆ ನೀಡಿದ್ದಾರೆ.