ನ್ಯಾಯಾಂಗದಲ್ಲಿ ಕನ್ನಡ ಇನ್ನೂ ಮರೀಚಿಕೆ: ಹೈಕೋರ್ಟ್‌ನಲ್ಲಿ ಕಡ್ಡಾಯವಾಗದ ಹೊರತು ಸಾಧ್ಯವಿಲ್ಲ

ಬೆಂಗಳೂರು ;.ನ್ಯಾಯಾಂಗದಲ್ಲಿ ಕನ್ನಡ ಮರಿಚಿಕೆಯಾಗಿಯೇ ಉಳಿದಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಯಾಗುತ್ತಿದೆಯಾದರೂ ಬಹುತೇಕ ಕೋರ್ಟ್ ಕಲಾಪ ಆಂಗ್ಲಮಯವೇ
ಅದಕ್ಕೆ ಕಾರಣ ಆಳುವ ಸರ್ಕಾರ ಇಚ್ಛಾಶಕ್ತಿ ಅತ್ಯಂತ ಪ್ರಮುಖವಾದುದು.
ಕೆಳ ಹಂತದ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಬಳಕೆಗೆ ಒತ್ತು ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಗ್ಗಾಗ್ಗೆ ಕರೆ ನೀಡುತ್ತಲೇ ಇದ್ದಾರೆ, ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯ ಅಧಿಕೃತ ಭಾಷಾ ಸಮಿತಿ ಕೂಡ ಸ್ಥಳೀಯ ಭಾಷಗಳಿಗೆ ಆದ್ಯತರೆ ನೀಡಬೇಕೆಂದು ಹೇಳಿದ್ದಾರೆ. ಆದರೆ ಅವೆಲ್ಲಾ ಹೇಳಿಕೆಗಳೇ ಹೊರತು ಒಂದಿಂಚೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ.
ಹೈಕೋರ್ಟ್‌ನಲ್ಲೇ ಮೊದಲು ಆಗಬೇಕು:
ನ್ಯಾಯಾಂಗದಲ್ಲಿ ಕನ್ನಡ ಸಮಗ್ರವಾಗಿ ಬಳಕೆಯಾಗಬೇಕೆಂದರೆ ಮೊದಲು ಕನ್ನಡವನ್ನು ಹೈಕೋರ್ಟ್‌ನಲ್ಲಿ ಕಡ್ಡಾಯಗೊಳಿಸಬೇಕು. ಆದಾಗದ ಹೊರತು ಅಧೀನ ನ್ಯಾಯಾಲಯಗಳಲ್ಲಿ ಸಂಪೂರ್ಣ ಕನ್ನಡ ಬಳಕೆ ಗಗನ ಕುಸುಮವೇ ಸರಿ.
ಸದ್ಯ ಕೆಲ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಕೆಯಲ್ಲಿದ್ದರೂ ಅದು ಕಡ್ಡಾಯವಲ್ಲ, ಐಚ್ಛಿಕ. ಆ ಕುರಿತು ಯಾವುದೇ ಅಧಿಕೃತ ಆದೇಶವಿಲ್ಲ, ಕನ್ನಡ ಬಳಕೆ ಮಾಡಲೇಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ಆದರೆ ಕನ್ನಡ ಭಾಷೆಯ ಬಗ್ಗೆ 'ಅಕ್ಕರೆ' ಹೊಂದಿರುವ ನ್ಯಾಯಾಧೀಶರು, ವಕೀಲರು ಆಸಕ್ತಿ ವಹಿಸುತ್ತಿರುವುದರಿಂದ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ 'ನ್ಯಾಯಾಂಗದಲ್ಲಿ ಕನ್ನಡ'ಕ್ಕೆ ಸ್ವಲ್ಪ ಪ್ರೋತ್ಸಾಹ ನೀಡುತ್ತಿರುವುದರಿಂದ ಕೋರ್ಟ್‌ಗಳಲ್ಲಿ ಸ್ವಲ್ಪ ಮಟ್ಟಿನ ಕನ್ನಡ ಬಳಕೆಯಲ್ಲಿದೆ.
ಆದರೆ ಶೇ.95ರಷ್ಟು ನ್ಯಾಯಾಲಯದಲ್ಲಿ ಬಳಕೆಯಾಗುವುದು ಇಂಗ್ಲೀಷ್, ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದರೂ, ಇನ್ನೂ ಸಂಪೂರ್ಣ ಕನ್ನಡಮಯವಾಗಲು ದಶಕಗಳೆ ಹಿಡಿದರೂ ಅಚ್ಚರಿಯಿಲ್ಲ.
ಹೈಕೋರ್ಟ್‌ನಲ್ಲಂತೂ ತಾಂತ್ರಿಕ ತೊಂದರೆಯ ಕಾರಣಕ್ಕೆ ಕನ್ನಡ ಬಳಕೆ ಬಹುತೇಕ ಇಲ್ಲವೇ ಇಲ್ಲ. ಸಿಜೆ ಸೇರಿ ಕೆಲವು ನ್ಯಾಯಮೂರ್ತಿಗಳು ಹೊರ ರಾಜ್ಯದವರಾಗಿರುವುದರಿಂದ ಅವರಿಗೆ ಕನ್ನಡ ತಿಳಿದಿಲ್ಲವಾದ್ದರಿಂದ ಅವರಿಗೆ ದಾಖಲೆಗಳನ್ನು ಆಂಗ್ಲಭಾಷೆಯಲ್ಲಿಯೇ ಒದಗಿಸಬೇಕಾಗಿದೆ.
ಕೊಳೆಯುತ್ತಿದೆ ಪ್ರಸ್ತಾವ:
"ಆಡಳಿತ ಭಾಷಾ ಕಾಯ್ದೆ 1963ರ ಪ್ರಕಾರ 1965ರ ಜ.26ರ ನಂತರವೂ ಒಕ್ಕೂಟದ ಆಡಳಿತ ಭಾಷೆಯಾಗಿ ಹಿಂದಿಯ ಜೊತೆಗೆ ಇಂಗ್ಲಿಷ್ ಮುಂದುವರಿಸಲು ಅವಕಾಶ ನೀಡಿದೆ. ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಒಂದು ರಾಜ್ಯದ ರಾಜ್ಯಪಾಲರು ರಾಷ್ಟ್ರಪತಿಗಳ ಪೂರ್ವಾನುಮತಿ ಪಡೆದು ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಅಧಿಕೃತ ಭಾಷೆ ಬಳಸಲು ಅನುವು ಮಾಡಿಕೊಡಬಹುದು" ಎನ್ನುತ್ತಾರೆ ಕಾನೂನು ತಜ್ಞರು.
ಅದನ್ನು ಆಧರಿಸಿ ಕರ್ನಾಟಕ ಹೈಕೋರ್ಟ್‌ನಲ್ಲೂ ಕನ್ನಡದ ಬಳಕೆಗೆ ಅವಕಾಶ ನೀಡಬೇಕೆಂದು 2014ರಲ್ಲಿ ಅಂದಿನ ವಿಧಾನಪರಿಷತ್ ಸದಸ್ಯ ಆರ್.ಕೆ.ಸಿದ್ಧರಾಮಣ್ಣ ಖಾಸಗಿ ವಿಧೇಯಕ ಮಂಡಿಸಲು ಸಜ್ಜಾಗಿದ್ದರು. ಆದರೆ ಆಗ ಸರ್ಕಾರವೇ ನಿರ್ಣಯ ಮಂಡಿಸಿತು, ಅದರಂತೆ 2015ರಲ್ಲಿ ನಿರ್ಣಯ ಅಂಗೀಕರಿಸಿ ಅದನ್ನು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು, ಆ ಪ್ರಸ್ತಾವ ಇನ್ನೂ ಅಲ್ಲೇ ಕೊಳೆಯುತ್ತಿದೆ.
ಏಳು ವರ್ಷವಾದರೂ ಆ ಪ್ರಸ್ತಾವಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕರ್ನಾಟಕದ ಪ್ರಸ್ತಾವ ಮಾತ್ರವಲ್ಲದೆ ತಮಿಳುನಾಡು, ತೆಲಂಗಣಾ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಪ್ರಸ್ತಾವ ನೆನಗುದಿಗೆ ಬಿದ್ದಿವೆ.
ಆದರೆ ಸದ್ಯ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಹಲವು ಹೈಕೋರ್ಟ್‌ಗಳಲ್ಲಿ ಹಿಂದಿ ಭಾಷೆಯನ್ನು ಬಳಕೆ ಮಾಡಲು ಕೇಂದ್ರ ಅನುಮತಿ ನೀಡಿದೆ. ಹಾಗಾಗಿ ಅಲ್ಲಿನ ನ್ಯಾಯಮೂರ್ತಿಗಳು ಹಿಂದಿಯಲ್ಲೇ ತೀರ್ಪುಗಳನ್ನೂ ಸಹ ನೀಡುತ್ತಿದ್ದಾರೆ.
ಸುಪ್ರೀಂ ಅಂಗಳದಲ್ಲಿ ಚೆಂಡು:
ಹೈಕೋರ್ಟ್‌ನಲ್ಲಿ ಕನ್ನಡ ಭಾಷೆ ಬಳಕೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದರೆ, ಸಹಜವಾಗಿಯೇ ವಿಚಾರಣಾ ಕೋರ್ಟ್‌ಗಳಲ್ಲೂಕನ್ನಡ ಬಳಕೆಗೆ ಹೆಚ್ಚಾಗಲಿದೆ.
ಸಾಮಾನ್ಯ ಜನರಿಗೆ ನಿಜಕ್ಕೂ ನ್ಯಾಯದಾನ ಲಭ್ಯವಾಗುವಂತೆ ಮಾಡುವುದಾದರೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ವಾದ-ಪ್ರತಿವಾದ ಮಂಡಿಸುವ ತೀರ್ಪು ನೀಡುವ ವ್ಯವಸ್ಥೆ ಜಾರಿಗೊಳಿಸಲು ಸುಪ್ರೀಂಕೋರ್ಟ್ ನಿರ್ಧಾರ ಕೈಗೊಳ್ಳಬೇಕು ಎನ್ನುತ್ತದೆ ವಕೀಲ ಸಮುದಾಯ.
ಸಂವಿಧಾನದ ಕಲಂ 348(2)ರಲಿ ಹೈಕೋರ್ಟ್‌ಗಳಲ್ಲಿ ಇಂಗ್ಲಿಷ್ ಭಾಷೆ ಬಳಸಲು ಅವಕಾಶ ನೀಡಲಾಗಿದೆ. ಅಂತೆಯೇ ಮಾತೃಭಾಷೆಯಲಿ ಹೈಕೋರ್ಟ್ ಕಲಾಪ ನಡೆಸಲು ಅನುವಾಗುವಂತೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ತಿದ್ದುಪಡಿ ತರಲು ಮುಂದಾಗಬೇಕು. ಆದು ಆದರೆ ಹೈಕೋರ್ಟ್‌ನಲ್ಲಿ ಕನ್ನಡದ ಕನಸು ನನಸಾಗುತ್ತದೆ.
ಪ್ರಾಧಿಕಾರ ಮುತುವರ್ಜಿ ತೋರಬೇಕು:
ಆಡಳಿತದಲ್ಲಿರುವಂತೆ ನ್ಯಾಯಾಂಗದಲ್ಲೂ ಕನ್ನಡವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವಂತಾಗಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಮುತುವರ್ಜಿ ತೋರಬೇಕು ಎನ್ನುವುದು ಕನ್ನಡಾಭಿಮಾನಿಗಳ ಅನಿಸಿಕೆ. ನ್ಯಾಯಾಂಗದಲ್ಲಿಕನ್ನಡ ಬಳಕೆ ಪ್ರೋತ್ಸಾಹಿಸಲು ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕನ್ನಡದಲ್ಲಿಯೇ ತೀರ್ಪು ನೀಡುವ ನ್ಯಾಯಾಧೀಶರನ್ನು ಗುರುತಿಸಿ ನಗದು, ಸ್ಮರಣಿಕೆ, ಪ್ರಮಾಣಪತ್ರದ ಮೂಲಕ ಪ್ರೊತ್ಸಾಹಿಸುವ ಪರಿಪಾಠ ಆರಂಭಿಸಿದರು. ಅದನ್ನು ಪ್ರಾಧಿಕಾರ ಮುಂದುವರಿಸಿಕೊಂಡು ಬರುತ್ತಿದೆ.
ಈ ಮಧ್ಯೆ, ನ್ಯಾಯಾಂಗದಲ್ಲಿಕನ್ನಡ ಬಳಕೆಗೆ ಎದುರಾಗುವ ಪದಬಳಕೆ, ಪರ್ಯಾಯ ಪದಗಳನ್ನು ಒದಗಿಸಲು ಪ್ರಾಧಿಕಾರ 'ಪದ ಕಣಜ' ಎಂಬ ಆಯಪ್ ರೂಪಿಸಿದ್ದು, ಅದರಲ್ಲಿ 86 ನಿಂಘಟುಗಳ ಪದಗಳನ್ನು ಸೇರಿಸಲಾಗಿದೆ, ಇನ್ನೂ 126 ನಿಘಂಟುಗಳ ಪದಗಳನ್ನು ಸೇರ್ಪಡೆ ಮಾಡಲಾಗುವುದು. ಜೊತೆಗೆ ನ್ಯಾಯಾಂಗದ ಪದಕೋಶವನ್ನೂ ಸಹ ಹೊರತಂದಿದೆ.