ಮತ್ತೊಮ್ಮೆ ಅಪ್ಪುವನ್ನು ಕಣ್ತುಂಬಿಕೊಳ್ಳಿ: 'ಗಂಧದ ಗುಡಿ' ಟ್ರೈಲರ್ ಬಿಡುಗಡೆ ದಿನಾಂಕ ಪ್ರಕಟ
ಪುನೀತ್ ರಾಜ್‌ಕುಮಾರ್ ಅನ್ನು ಕೊನೆಯ ಬಾರಿ ಬೆಳ್ಳತೆರೆಯ ಮೇಲೆ ಕಣ್ತುಂಬಿಕೊಳ್ಳುವ ಅವಕಾಶವನ್ನು ಅಭಿಮಾನಿಗಳಾಗಿ ಹೊತ್ತು ತರುತ್ತಿದೆ 'ಗಂಧದ ಗುಡಿ' ಡಾಕ್ಯುಸಿನಿಮಾ.
ಇದೇ ತಿಂಗಳ ಅಂತ್ಯಕ್ಕೆ ಪುನೀತ್ ರಾಜ್‌ಕುಮಾರ್ ಸ್ವತಃ ಪುನೀತ್ ರಾಜ್‌ಕುಮಾರ್ ಅವರಾಗಿಯೇ ಕಾಣಿಸಿಕೊಂಡಿರುವ 'ಗಂಧದ ಗುಡಿ' ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಈ ಡಾಕ್ಯುಸಿನಿಮಾದ ಟೀಸರ್ ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿದ್ದು, ಅಭಿಮಾನಿಗಳಿಗೆ ಮಾತ್ರವಲ್ಲ, ನೆರೆ ಚಿತ್ರರಂಗದ ಸಿನಿಮಾ ಕರ್ಮಿಗಳಿಗೂ ಸಹ ಕುತೂಹಲ ಮೂಡಿಸಿದೆ. ಇದೀಗ ಇದೇ ಡಾಕ್ಯುಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿರುವ ದಿನಾಂಕವನ್ನು ಪಿಆರ್‌ಕೆ ಸ್ಟುಡಿಯೋಸ್ ಘೋಷಿಸಿದೆ.
ಇದೇ ಅಕ್ಟೋಬರ್ 09 ರಂದು ಈ ಡಾಕ್ಯುಸರಣಿಯ ಟ್ರೈಲರ್ ಬಿಡುಗಡೆ ಆಗಲಿದೆ. ಪಿಆರ್‌ಕೆ ಆಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಕಾಣಲಿದೆ.
ಈ ಡಾಕ್ಯುಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್, ಅಮೋಘ ವರ್ಷ ಕರ್ನಾಟಕದ ಹಲವು ಭಾಗಗಳಿಗೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಡಾಕ್ಯು ಸರಣಿಗಾಗಿ ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘವರ್ಷ ಹಲವು ಕಠಿಣಾತಿಕಠಿಣ ಪ್ರದೇಶಗಳಲ್ಲಿ ನಡೆದಾಡಿದ್ದಾರೆ, ಕ್ಯಾಮೆರಾಗಳನ್ನು ಹೊತ್ತು ಕಷ್ಟಪಟ್ಟು ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದಾಖಲಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ನಿಧನರಾದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೂರನೇ ಸಿನಿಮಾ ಇದಾಗಿದೆ. ಮೊದಲಿಗೆ ಬಿಡುಗಡೆ ಆದ 'ಜೇಮ್ಸ್' ಸಿನಿಮಾ ದಾಖಲೆಗಳನ್ನು ಸೃಷ್ಟಿಸಿತ್ತು. ಆ ಬಳಿಕ ಅಪ್ಪು ಅತಿಥಿ ಪಾತ್ರದಲ್ಲಿ ನಟಿಸಿದ್ದ 'ಲಕ್ಕಿ ಮ್ಯಾನ್' ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಯಿತು. ಬಳಿಕ ಇದೀಗ 'ಗಂಧದ ಗುಡಿ' ಬಿಡುಗಡೆ ಆಗುತ್ತಿದೆ.