ಹಾರ್ದಿಕ್ ಪಾಂಡ್ಯರನ್ನು ಕೂಲ್ ಕ್ಯಾಪ್ಟನ್ ಎಂದ ಗುಜರಾತ್ ಟೈಟನ್ಸ್ ವೇಗಿ

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಇದೇ ಮಾರ್ಚ್ 31ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಇದೆ ವೇಳೆ 2023ರ ಐಪಿಎಲ್ ಋತುವಿನಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲು ಸಿದ್ಧವಾಗಿರುವ ಯುವ ಬೌಲರ್ ಶಿವಂ ಮಾವಿ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಕೂಲ್ ಕ್ಯಾಪ್ಟನ್ ಎಂದು ಬಣ್ಣಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ಕೋಲ್ಕತ್ತಾ ನೈಟ್ರೈಡರ್ಸ್ (ಕೆಕೆಆರ್) ಕೈಬಿಟ್ಟಿದ್ದರಿಂದ ಶಿವಂ ಮಾವಿಯನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಫ್ರಾಂಚೈಸಿ ಖರೀದಿಸಿತು.
24 ವರ್ಷದ ಯುವ ಬೌಲರ್ ಶಿವಂ ಮಾವಿ ಅವರು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಇದೀಗ ಪಾಂಡ್ಯ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಂ ಮಾವಿ, ಗುಜರಾತ್ ಟೈಟನ್ಸ್ ತಂಡದ ಪರ ಆಡಲು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಹಾರ್ದಿಕ್ ಪಾಂಡ್ಯ ತುಂಬಾ ಕೂಲ್ ಕ್ಯಾಪ್ಟನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ತಂಡಕ್ಕೆ ಹೊಸದಾಗಿ ಬರುವ ಯುವ ಆಟಗಾರರನ್ನು ಬೆಂಬಲಿಸುತ್ತಾರೆ ಮತ್ತು ತಂಡವು ತುಂಬಾ ಸ್ನೇಹಿಯಾಗಿದೆ ಎಂದು ವೇಗಿ ಶಿವಂ ಮಾವಿ ತಿಳಿಸಿದರು.
"ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡದಲ್ಲಿ ವಾತಾವರಣವು ಸ್ನೇಹಿಯಾಗಿದೆ. ಯುವ ಆಟಗಾರರಿಗೆ ಅವರಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ತಂಡಕ್ಕಾಗಿ ತಾನು ಉತ್ತಮ ಪ್ರದರ್ಶನ ನೀಡಲು ಸಮರ್ಥನಾಗಿದ್ದೇನೆ," ಎಂದು ಶಿವಂ ಮಾವಿ ಹೇಳಿದರು.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದನ್ನು ಶಿವಂ ಮಾವಿ ನೆನಪಿಸಿಕೊಂಡರು ಮತ್ತು ಆ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ತುಂಬಾ ಬೆಂಬಲ ನೀಡಿದರು ಎಂದು ಶ್ಲಾಘಿಸಿದರು.
ಹಾರ್ದಿಕ್ ಪಾಂಡ್ಯ ಯುವ ಆಟಗಾರರಿಗೆ ಬೆಂಬಲ ನೀಡುತ್ತಾರೆ
"ನಾನು ಚೊಚ್ಚಲ ಬಾರಿಗೆ ಭಾರತ ತಂಡಕ್ಕಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಿದಾಗ, ಅವರು ತುಂಬಾ ಬೆಂಬಲ ನೀಡಿದರು. ನಾಯಕನಿಂದ ಸಿಗುವ ಬೆಂಬಲವು ಯುವ ಆಟಗಾರರಿಗೆ ಬಹಳ ಮುಖ್ಯವಾಗಿರುತ್ತದೆ ಮತ್ತು ಅದು ಒಳ್ಳೆಯದು ಎಂದು ಭಾವಿಸುತ್ತೇನೆ. ನಾಯಕ ಮತ್ತು ತಂಡದ ಮ್ಯಾನೇಜ್ಮೆಂಟ್ ಉತ್ತಮ ವಾತಾವರಣವನ್ನು ಸೃಷ್ಟಿಸಿದರೆ, ತಂಡವಾಗಿ ಉತ್ತಮ ಪ್ರದರ್ಶನ ನೀಡುವುದನ್ನು ನೋಡಬಹುದು," ಎಂದು ಶಿವಂ ಮಾವಿ ಅಭಿಪ್ರಾಯಪಟ್ಟರು.
ಇನ್ನು ಗುಜರಾತ್ ಟೈಟನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಶಿವಂ ಮಾವಿ ಮಾತನಾಡಿ, ಭಾರತದ ಮಾಜಿ ವೇಗಿ ಆಟಗಾರರಿಗೆ ಸ್ವಾತಂತ್ರ್ಯವನ್ನು ನೀಡುತ್ತಾರೆ ಮತ್ತು ಸ್ನೇಹಿತನಂತೆ ವರ್ತಿಸುತ್ತಾರೆ ಎಂದರು.
ಆಶಿಶ್ ನೆಹ್ರಾ ಸ್ವಾತಂತ್ರ್ಯ ನೀಡುತ್ತಾರೆ
"ಕೋಚ್ ಆಶಿಶ್ ನೆಹ್ರಾ ಅವರು ನಮಗೆ ಸ್ವಾತಂತ್ರ್ಯವನ್ನು ನೀಡುತ್ತಾರೆ ಮತ್ತು ನಮ್ಮ ಸಮಯವನ್ನು ಮೈದಾನದಲ್ಲಿ ಸರಿಯಾಗಿ ಬಳಸಿಕೊಳ್ಳಲು ಬಿಡುತ್ತಾರೆ. ನಮಗೆ ವಿಶ್ರಾಂತಿ ಬೇಕಾದರೆ ಅದಕ್ಕೆ ಸಮ್ಮತಿಸುತ್ತಾರೆ. ಅವರು ಸ್ನೇಹಿತನಂತೆ, ಏನಾದರೂ ಬೇಕಾದರೂ ಅವರ ಬಳಿ ಹೋಗಿ ಕೇಳಬಹುದು. ಆಶಿಶ್ ನೆಹ್ರಾ ಅವರು ತಂಡದ ವಾತಾವರಣವನ್ನು ಉತ್ತಮವಾಗಿರಿಸಿದ್ದಾರೆ," ಎಂದು ಗುಜರಾತ್ ಟೈಟನ್ಸ್ ವೇಗಿ ಶಿವಂ ಮಾವಿ ತಿಳಿಸಿದರು.